ಮೂರ್ನಾಡು, ಡಿ. 27: ಪ್ರತಿಯೊಬ್ಬರು ಜ್ಞಾನ ಸಂಪಾದನೆಯೊಂದಿಗೆ ಸನ್ಮಾರ್ಗದಲ್ಲಿ ಬಾಗಿ ನಡೆಯುವದು ನಿಜವಾದ ಬದುಕು ಎಂದು ಖ್ಯಾತ ವಾಗ್ಮಿ ವಿದ್ವಾನ್ ಹಿರೇಮಗಳೂರು ಕಣ್ಣನ್ ನುಡಿದರು. ವಿದ್ಯೆ, ಜ್ಞಾನ, ಸಂಪತ್ತು ಎಲ್ಲವೂ ಜೀವನದಲ್ಲಿ ಸನ್ಮಾರ್ಗದಲ್ಲಿ ಸಾಗಲು ಸಹಕಾರಿಯಾಗಬೇಕು ಹೊರತು ಬೀಗುವದಕ್ಕೆ ಅಲ್ಲವೆಂದು ನೆನಪಿಸಿದರು.ಮೂರ್ನಾಡು ವಿದ್ಯಾಸಂಸ್ಥೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡು ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕಣ್ಣನ್ ಮಾತನಾಡುತ್ತಿದ್ದರು. ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರ ಆದರ್ಶಗಳು ಎಲ್ಲರ ಹೃದಯದಲ್ಲಿ ಇರಬೇಕು. ಕೇವಲ ಪ್ರತಿಮೆಗಳನ್ನು ಪ್ರತಿಷ್ಟಾಪಿಸಿ ರಾಜಕಾರಣಿಗಳು ಮಾಲೆ ಹಾಕುವ ದರಿಂದ ಪ್ರಯೋಜನವೇನು ಇಲ್ಲ. ನಮ್ಮ ದೇಶ ‘‘ಟೇಕ್ ಕೇರ್ ಸಂಸ್ಕøತಿ, ಡೋಂಟ್ ಕೇರ್’’ ಸಂಸ್ಕøತಿ ಅಲ್ಲ. ಯಾವದೆ ದಿಮಾಕ್ಕುಗಳು ಪ್ರಕೃತಿಯ ಮುಂದೆ ನಿಲ್ಲುವದಿಲ್ಲ. ವಿದ್ಯೆ ಪವಿತ್ರ ವಾದುದು. ಆದರೆ ಈಗಿನ ವಿದ್ಯಾ ಕ್ಷೇತ್ರಗಳ ದೃಷ್ಟಿಕೋನವೇ ಬೇರೆ ಯಾಗಿದೆ. ಸಂಬಳಕ್ಕಾಗಿಯೇ ಕರ್ತವ್ಯ ನಿರ್ವಹಿಸಿದರೆ; ನಮ್ಮ ಸಂಸ್ಕøತಿಯನ್ನು ಬೆಳೆಸುವ ಕಾರ್ಯ ಸ್ಥಗಿತವಾಗುತ್ತದೆ. ‘‘ನುಡಿದರೆ ಮುತ್ತಿನ ಹಾರದಂತಿರ ಬೇಕು ಎಂಬವದೀಗ ಕುಡಿದರೆ ಮೆಟ್ಟಲು ಜಾರದಂತಿರಬೇಕು’’ ಎಂದು ಪ್ರಜಾಪ್ರಭುತ್ವ ಸರ್ಕಾರ ಡಿವೈನ್ ಸೆಂಟರ್‍ಗಳಿಗಿಂತ ವೈನ್ ಸೆಂಟರ್ ಗಳಿಂದ ಹಣ ಗಳಿಸುತ್ತಿದೆ. ಪ್ರಪಂಚದಲ್ಲೆ ರೈತನನ್ನು ಒಬ್ಬ ಯೋಗಿ ಎಂದು ಕರೆದು ಕೊಂಡ ನಾಡು ಕರ್ನಾಟಕ. ದೇಶದ ಪ್ರಪ್ರಥಮ ಸೈನಿಕ ರೈತನಾಗಿದ್ದಾನೆ ಎಂದು ಬಣ್ಣಿಸಿದರು.
(ಮೊದಲ ಪುಟದಿಂದ) ದೇಶ ಪ್ರೇಮ ವಿದ್ಯಾರ್ಥಿಗಳಲ್ಲಿ ಬಹಳ ಮುಖ್ಯವಾಗಿರಬೇಕು. ದೇಹ ಪ್ರೇಮವಲ್ಲ. ಮಾತಿಗೆ ಮಾತು ಸೇರಿದರೆ ನುಡಿ, ಮಾತಿಗೆ ಮಾತು ತಾಕಿದರೆ ಕಿಡಿಯಾಗುತ್ತದೆ. ಜ. ತಿಮ್ಮಯ್ಯ ಪತ್ರಿಕಾ ಗೋಷ್ಠಿಯಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡಿದ್ದಕ್ಕೆ ಸ್ವಯಂ ತಾವೇ ನ್ಯಾಯಾಲಯಕ್ಕೆ ಹೋಗಿ ದಂಡ ಕಟ್ಟಿ ಬಂದಿರುವದು ಅವರ ಕಾನೂನು ಪಾಲನೆಯ ಪ್ರತೀಕವಾಗಿದೆ. ಆದರೆ ಭ್ರಷ್ಟಾಚಾರ ಎಲ್ಲಾ ಕಡೆ ತಾಂಡವವಾಡುತ್ತಿದೆ. ಎರಡು ಕೈಕಾಲು ಇಲ್ಲದಿರುವ ತಮಿಳುನಾಡಿನ ಕೃಷ್ಣಮೂರ್ತಿ ಸಾಹಿತ್ಯ, ಸಂಗೀತ ಎಲ್ಲ ರಂಗಗಳಲ್ಲೂ ಹೆಸರು ಮಾಡಿದ ಅಪ್ರತಿಭ ಪ್ರತಿಭೆ. ಎಲ್ಲಾ ಅಂಗಾಂಗಗಳು ಸರಿ ಇರುವವರು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಅವರು ನೆನಪಿಸಿದರು. ವಿದ್ಯಾರ್ಥಿಗಳು ವಿದ್ಯೆ ಕಲಿತ ಶಾಲೆಗೆ, ಪೋಷಕರಿಗೆ ಕೀರ್ತಿ ತರುವಂತಹ ಸಾಧನೆಗೈಯಬೇಕು ಎಂದು ತಿಳಿ ಹೇಳಿದರು.
ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ ಭತ್ತ, ಬೆಲ್ಲ, ತೆಂಗಿನ ಕಾಯಿಗಳನ್ನು ಇಡುವದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದೆ. ದೇವರು, ಆದರ್ಶ ಪುರುಷರು ಕಷ್ಟಗಳನ್ನು ಕಂಡಿದ್ದಾರೆ. ಆದರೆ ಇವರಿಗೆಲ್ಲಾ ಆತ್ಮ ಶಕ್ತಿಯ ಅರಿವು ಇತ್ತು. ಇದನ್ನು ನಾವು ಕೂಡ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜಾ ಮಾದಪ್ಪ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಅಂಬೆಕಲ್ ಕುಶಾಲಪ್ಪ, ಸುಶೀಲ, ಮೂರ್ನಾಡು ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ. ಪ್ರಶಾಂತ್, ಕಾರ್ಯದರ್ಶಿ ಕೆ.ಜಿ. ಹರೀಶ್, ಖಜಾಂಚಿ ಎಂ.ಸಿ. ನವೀನ್ ಮತ್ತು ವಿಜಯವಾಣಿ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರ ಎಂ.ಎನ್. ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕಿ ಕಮಲು ಮುದ್ದಯ್ಯ ಉಪಸ್ಥಿತರಿದ್ದರು.