ಸೋಮವಾರಪೇಟೆ, ಡಿ. 27: ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ ರೂ. 1.70 ಕೋಟಿ ವೆಚ್ಚದಲ್ಲಿ, ಪ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೀರಾ ಹಾಳಾಗಿದ್ದ ರಸ್ತೆಗಳನ್ನು ಮರು ಡಾಂಬರೀಕರಣ, ಕಾಂಕ್ರೀಟ್ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ಕೆಲಸ ಭರದಿಂದ ಸಾಗುತ್ತಿದೆ.
ಕಳೆದ ಸಾಲಿನಲ್ಲಿಯೇ ನಗರೋತ್ಥಾನ ಯೋಜನೆಯಡಿ ರೂ. 1.70 ಕೋಟಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿಗೆ ಚಾಲನೆ ನೀಡಬೇಕೆನ್ನುವಷ್ಟರಲ್ಲಿ ವಿಧಾನ ಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆ ಎದುರಾಗಿತ್ತು. ಇದರೊಂದಿಗೆ ಮಳೆಗಾಲವೂ ಪ್ರಾರಂಭವಾದ್ದರಿಂದ ರಸ್ತೆ ಕಾಮಗಾರಿ ಮಾಡಲು ಸಾಧ್ಯವಾಗಿರಲಿಲ್ಲ.
ಇದೀಗ ಕಾಮಗಾರಿ ಭರದಿಂದ ಸಾಗುತ್ತಿದ್ದು, ರೂ. 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ರೂ. 1.10 ಕೋಟಿ ವೆಚ್ಚದಲ್ಲಿ ಡಾಂಬರು ರಸ್ತೆಗಳು, ಮಾರುಕಟ್ಟೆ ಬಳಿಯಲ್ಲಿ ರೂ. 10 ಲಕ್ಷ ವೆಚ್ಚದ ಪಾರ್ಕಿಂಗ್ ಸೌಲಭ್ಯ, ತಾಲೂಕು ಕಚೇರಿ ಸಮೀಪ ರೂ. 5 ಲಕ್ಷ ವೆಚ್ಚದಲ್ಲಿ ಶೌಚಾಲಯ, ಕರ್ಕಳ್ಳಿಯಲ್ಲಿ ರೂ. 20 ಲಕ್ಷದಲ್ಲಿ ಕುಡಿಯುವ ನೀರಿನ ಸರಬರಾಜು ತೊಟ್ಟಿ, ರೂ. 15 ಲಕ್ಷದಲ್ಲಿ ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಭಿಯಂತರ ವೀರೇಂದ್ರ ಮಾಹಿತಿ ನೀಡಿದ್ದಾರೆ.