ಗೋಣಿಕೊಪ್ಪ, ಡಿ. 27: ಇಲ್ಲಿಗೆ ಸಮೀಪದ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಉದಯ ಟಿ.ವಿ.ಯ ಹಿರಿಯ ಪತ್ರಕರ್ತ ಚೋವಂಡ ಬೋಪಯ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಯುವಜನತೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರು.

ಮಾಧ್ಯಮವೆಂದರೆ ಜನರಿಗೆ ಸರಿಸಾಟಿಯಾಗಿ ವಿಷಯಗಳನ್ನು ನೇರವಾಗಿ ತಲಪಿಸುವಂತಹ ಒಂದು ಅಂಗವಾಗಿದೆ. ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಂತಹ ಪ್ರತಿಯೊಂದು ವ್ಯಕ್ತಿಯು ಅತ್ಯಂತ ನೈತಿಕತೆಯಿಂದ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಹಾಗೆ ಯಾರೇ ಆಗಿರಲಿ ತಾವುಗಳು ತೊಡಗಿಸಿಕೊಂಡಂತಹ ವೃತ್ತಿಯಲ್ಲಿ ಅತ್ಯಂತ ನೈತಿಕತೆಯನ್ನು ಪಾಲಿಸಿಕೊಳ್ಳಬೇಕು. ಅದೇ ರೀತಿಯಲ್ಲಿ ಮಾಧ್ಯಮವು ಕನ್ನಡಿ ಇದ್ದಂತೆ ಯಾವದೇ ವಿಷಯಗಳನ್ನು ಅದೇ ರೀತಿಯಲ್ಲಿ ಜನರ ಮುಂದೆ ನೀಡುತ್ತದೆ. ಹೀಗೆ ಯುವ ಜನತೆಯು ತಮ್ಮನ್ನು ನೈತಿಕತೆಯಿಂದ ತೊಡಗಿಸಿಕೊಳ್ಳುವದು ಅವಶ್ಯಕವೆಂದರು.

ಜೀವನವನ್ನು ಅತ್ಯಂತ ಸೂಕ್ಷ್ಮವಾಗಿ ಚಲಿಸುವದು ಮುಖ್ಯವಾಗಿದೆ. ಎನ್ನುತ್ತ ಮಾಧ್ಯಮ ತಂತ್ರಜ್ಞಾನವು ಯುವ ಜನತೆಯನ್ನು ಬೆಳೆಸಲು ಪೂಕರವಾಗಬೇಕು ಹೊರತು ಕೆಡುವದಕ್ಕೆ ಭಾಗಿಯಾಗಬಾರದು ಎಂದರು.

ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೇಚೆಟ್ಟಿರ ಈರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರು ಶಿಬಿರಾರ್ಥಿಗಳು ಭಾಗವಹಿಸಿದ್ದರು.