ಮಡಿಕೇರಿ, ಡಿ. 26: ತಲಕಾವೇರಿ ಕ್ಷೇತ್ರದಲ್ಲಿ ಈ ಹಿಂದಿನ ಭೂಗತ ಅಗಸ್ತ್ಯೇಶ್ವರ ಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸುವದು ಸೇರಿದಂತೆ, ಬದಲಿ ಪೂಜಾ ಲಿಂಗ ಪ್ರತಿಷ್ಠಾಪನೆಯ ಸಂಬಂಧ ಇಂದು ದೈವಜ್ಞರಿಂದ ವಿಮರ್ಶೆ ಏರ್ಪಡಿಸಿದ್ದ ವೇಳೆಯಲ್ಲಿ ಒಮ್ಮತ ಮೂಡದೆ ಗೊಂದಲದ ವಾತಾವರಣ ಸೃಷ್ಟಿಯಾದ ಕಾರಣ; ದೈವಜ್ಞರು ಪ್ರಶ್ನೆ ವಿಮರ್ಶೆ ಸ್ಥಗಿತಗೊಳಿಸಿರುವ ಬೆಳವಣಿಗೆ ಎದುರಾಯಿತು.ಮುಂದುವರಿದ ವಿಮರ್ಶೆಯನ್ನು ಬರುವ ಜನವರಿ ತಾ. 15 ಹಾಗೂ 16 ರಂದು ನಡೆಸಲಾಗುವದು ಎಂದು ತಲಕಾವೇರಿ ಭಾಗಮಂಡಲ ಕ್ಷೇತ್ರಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಪ್ರಕಟಿಸಿದರು. ಅಲ್ಲದೆ ಪ್ರಾಚ್ಯವಸ್ತು ಇಲಾಖೆಯ ತಜ್ಞ ನಾಯಕಂಡ ಪ್ರಕಾಶ್ ಮುತ್ತಪ್ಪ ಅವರು, ಅಗಸ್ತ್ಯೇಶ್ವರ ಗುಡಿಯ ಭೂಗತ ಶಿವಲಿಂಗವನ್ನು ಇಂದು ಪರಿಶೀಲಿಸಿ ಅದು ಗಂಗರ ಕಾಲದೆಂದು ಅಭಿಪ್ರಾಯ ಪಟ್ಟಿದ್ದಾರೆ.ವಿಮರ್ಶೆಗೆ ಆಕ್ಷೇಪ : ಇಂದು ಬೆಳಿಗ್ಗೆ ನೀಲೇಶ್ವರ ಪದ್ಮನಾಭ ತಂತ್ರಿಗಳ ಸಮ್ಮುಖದಲ್ಲಿ ಕಳೆದ ಮೇ - ಜೂನ್‍ನಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿದ್ದ ಜ್ಯೋತಿಷಿ ಕೇರಳದ ನಾರಾಯಣ ಪೊದುವಾಳ್ ಹಾಗೂ ತಂಡ; ಈಚೆಗೆ ಭೂಗತಲಿಂಗ ಹೊರ ತೆಗೆದು ಬಾಲಾಲಯದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆ ಸಂಬಂಧ ವಿಮರ್ಶೆ ನಡೆಸಲು ಮುಂದಾದರು. ಆರಂಭದಲ್ಲೇ ಕ್ಷೇತ್ರದ ಪ್ರದಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ವಿಮರ್ಶೆ ಕುರಿತು ಸಂಶಯ ವ್ಯಕ್ತಪಡಿಸಿದರು. ಕಳೆದ ಅಷ್ಟಮಂಗಲ ಪ್ರಶ್ನೆ ಸಂದರ್ಭ ವಿದೇಶ ಪ್ರವಾಸದಲ್ಲಿದ್ದ ತಮ್ಮ ಚಾರಿತ್ರ್ಯಕ್ಕೆ ಕುಂದು ತರುವ ರೀತಿ ದೈವಜ್ಞರು ಮಾತನಾಡಿದಲ್ಲದೆ, ಕಾವೇರಿ ಕ್ಷೇತ್ರ ಹಾಗೂ ಅಗಸ್ತ್ಯೇಶ್ವರ ಲಿಂಗದ ಕುರಿತು ಭಕ್ತರಿಗೆ ನೋವಾಗುವಂತಹ ಪದಗಳನ್ನು ಬಳಸಿರುವದು ಸರಿಯೇ? ಎಂದು ಪ್ರಶ್ನಿಸಿದರು.

ಮ್ಯಾಚ್ ಫಿಕ್ಸಿಂಗ್: ಅದೇ ದೈವಜ್ಞರನ್ನು ಇಂದು ಮತ್ತೆ ಕರೆಸಿಕೊಂಡು ವಿಮರ್ಶೆ ನಡೆಸುವದು ಗಮನಿಸಿದರೆ, ಇದೊಂದು ‘ಮ್ಯಾಚ್ ಫಿಕ್ಸಿಂಗ್’ ರೀತಿ ಸಂಶಯ ಮೂಡಿದೆ ಎಂದರು. ಆ ಬೆನ್ನಲ್ಲೇ ತೀವ್ರ ಗೊಂದಲ, ಮಾತಿನ ಚಕಮಕಿ, ಅಸಮಾಧಾನದ ನಡುವೆ ಕೆಲವರು ಪರಸ್ಪರ ಟೀಕೆಗಳಲ್ಲಿ ತೊಡಗಿದ ದೃಶ್ಯ ಎದುರಾಯಿತು.

ತಂತ್ರಿಗಳ ಸಮಜಾಯಿಷಿಕೆ: ಈ ಹಂತದಲ್ಲಿ ಕೆಲವರು ಏರುದನಿಯಲ್ಲಿ ನಾರಾಯಣಾಚಾರ್ ಮಾತಿಗೆ ಆಕ್ಷೇಪಿಸಿ, ವಿಮರ್ಶೆ ಮುಂದುವರೆಸಲು ಸಲಹೆ ಮಾಡಿದರು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನೀಲೇಶ್ವರ ತಂತ್ರಿಗಳು, ಕ್ಷೇತ್ರದ ನಿಯಮದಂತೆ ಗೊಂದಲ ಪರಿಹರಿಸಿಕೊಂಡು ಯಾರಿಂದಲಾದರೂ ತಪ್ಪಾಗಿದ್ದರೆ ಎಲ್ಲವನ್ನು ಸರಿಪಡಿಸುವ ದಿಕ್ಕಿನಲ್ಲಿ ವಿಮರ್ಶೆ ಮೂಲಕ ದೈವಾನುಗ್ರಹದಂತೆ ಮುಂದುವರಿಯೋಣ ಎಂದು ಸಮದಾನಿಸಲು ಪ್ರಯತ್ನಿಸಿದರು.

ಮತ್ತಷ್ಟು ಕ್ರೋಧ: ಅಷ್ಟಕ್ಕೆ ಸುಮ್ಮನಾಗದ ನಾರಾಯಣಾಚಾರ್, ಅಷ್ಟಮಂಗಲದಲ್ಲಿ ಭೂಗತ ಲಿಂಗ ಹೊರತೆಗೆದರೆ ತಂತ್ರಿಗಳಿಗೂ ದೋಷವೆಂದು ಕಂಡು ಬಂದಿದ್ದು, ಮರೆಮಾಚಲಾಗಿದೆ ಎಂದರು. ಈ ವೇಳೆ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ಕೆಲವಷ್ಟು ಮುದ್ರಣ ಲೋಪವಿದ್ದು, ಅದನ್ನು ಸರಿಪಡಿಸಿ ಮರು ಮುದ್ರಣಕ್ಕೆ ಗಮನ ಕೊಡಲಾಗಿದೆ ಎಂದರು. ಈ ನಡುವೆ ತಂತ್ರಿಗಳೊಂದಿಗೆ ನಾರಾಯಣಾಚಾರ್ ಆಡಿದ ಕೆಲವೊಂದು ಮಾತು ಉಭಯಕಡೆ ಆಕ್ರೋಶಕ್ಕೆ ಕಾರಣವಾಯಿತು.

ಎಂ.ಬಿ. ದೇವಯ್ಯ ಪ್ರವೇಶ: ಆ ವೇಳೆಗೆ ನಾರಾಯಣಾಚಾರ್ ಮಾತಿಗೆ ಕೋಡಿ ಪೊನ್ನಪ್ಪ, ಕುದುಕುಳಿ ಭರತ್ ಹಾಗೂ ಇತರರು ಸಮಜಾಯಿಷಿಕೆ ನೀಡುತ್ತಿದ್ದಂತೆಯೇ, ಎಂ.ಬಿ. ದೇವಯ್ಯ ಮಧ್ಯಪ್ರವೇಶಿಸಿ, ಅಷ್ಟಮಂಗಲ ಪ್ರಶ್ನೆಯಲ್ಲಿ ದೈವಜ್ಞರಿಗೆ ಒತ್ತಡ ಪೂರ್ವಕ ವಿಷಯ ಹೇಳಿಸಿದ್ದಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಮಣವಟ್ಟಿರ ದೊರೆ ಹಾಗೂ ದೇವಯ್ಯ ನಡುವೆ ತೀವ್ರ ಜಟಾಪಟಿಯೂ ಎದುರಾಯಿತು.

ಜೋಳಿಗೆ ಸೇರಿದ ಕವಡೆಗಳು: ಅಷ್ಟು ಸಮಯಕ್ಕೆ ಗಂಟೆ 12 ದಾಟುವದರೊಂದಿಗೆ, ಬುಧವಾರ 12 ರಿಂದ 1.30ರ ವೇಳೆ ರಾಹುಕಾಲವಾದ್ದರಿಂದ, ದೈವಜ್ಞ ನಾರಾಯಣ ಪೊದುವಾಳ್ ಪ್ರಶ್ನೆ ಮುಂದುವರೆಸದೆ ಕೆಲವರು ಆಡಿದ ಮಾತಿನಿಂದ ಬೇಸರಗೊಂಡು, ವಿಮರ್ಶೆ ಮೊಟಕುಗೊಳಿಸಿ ಕವಡೆಗಳನ್ನು ಜೋಳಿಗೆಗೆ ತುಂಬಿಸಿಟ್ಟರು. ಅಲ್ಲದೆ, ತಾವು ಅಷ್ಟಮಂಗಲದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಯಾರೇ ಪ್ರಶ್ನೆ ಮಾಡುವದಿದ್ದರೂ ಮುಕ್ತ ಚರ್ಚೆಗೆ ಸಿದ್ಧರೆಂದು ಘೋಷಿಸಿದರು.

(ಮೊದಲ ಪುಟದಿಂದ) ಮತ್ತೆಯೂ ಎಂ.ಬಿ. ದೇವಯ್ಯ ಮುಂದುವರೆಸಿದ್ದ ಮಾತಿಗೆ ತಂತ್ರಿಗಳು ಉತ್ತರಿಸುತ್ತಾ, ಕೊಡಗಿನ ಜನತೆ ಪರ - ವಿರೋಧ ಬಿಟ್ಟು ಕ್ಷೇತ್ರದ ಅಭಿವೃದ್ಧಿಗಾಗಿ, ಕಾವೇರಿ ಮಾತೆಯ ಕೃಪೆಗಾಗಿ ಒಗ್ಗೂಡಿ ಮತ್ತೆ ಈ ವಿಮರ್ಶೆ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ತಿಳಿಹೇಳಿದರು. ಆ ಮೇರೆಗೆ ಇಂದು ಸ್ಥಗಿತಗೊಳಿಸಿ ರುವ ದೈವಜ್ಞರ ವಿಮರ್ಶೆಯನ್ನು, ತಂತ್ರಿಗಳ ಸಲಹೆ ಪಡೆದು, ದೈವಜ್ಞ ಕಲ್ಪಿಸಿರುವ ದಿನದಂತೆ ಜ. 15 ಹಾಗೂ 16ಕ್ಕೆ ನಿಶ್ಚಯಿಸಿದ್ದಾಗಿದೆ ಎಂದು ಬಿ.ಎಸ್. ತಮ್ಮಯ್ಯ ಸ್ಪಷ್ಟಪಡಿಸಿದರು. ಇಂದಿನ ವಿಮರ್ಶೆ ಸಂದರ್ಭ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ದೇವಾಲಯ ಸಮಿತಿ ಸದಸ್ಯರು, ಅರ್ಚಕ ಕುಟುಂಬಸ್ಥರು, ಸದ್ಭಕ್ತರು, ಸಂಘ - ಸಂಸ್ಥೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪೊಲೀಸ್ ಮಧ್ಯಪ್ರವೇಶವೂ ಗೋಚರಿಸಿತು.