ಮಡಿಕೇರಿ, ಡಿ. 26: ನಗರದ ಗಾಲ್ಫ್ ಮೈದಾನ ಬಳಿ ಸುಂದರ ಪರಿಸರದಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಕೊಡವ ಹೆರಿಟೇಜ್ ಕಟ್ಟಡವನ್ನು, ಸಂಬಂಧಿಸಿದ ಇಲಾಖೆಯವರು ಕೆಡವಲು ಮುಂದಾಗಿದ್ದಾರೆಯೇ? ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾ. 27 ರಂದು (ಇಂದು) ಜಿಲ್ಲೆಗೆ ಭೇಟಿ ನೀಡುತ್ತಿರುವ ರಾಜ್ಯ ಪ್ರವಾಸೋದ್ಯಮ ಸಚಿವರೂ ಆಗಿರುವ,(ಮೊದಲ ಪುಟದಿಂದ) ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು, ಖುದ್ದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಾ. 24ರ ‘ಶಕ್ತಿ’ಯಲ್ಲಿ ಈ ಸಂಬಂಧ ಸಚಿತ್ರ ವರದಿ ಗಮನಿಸಿ, ಇಂದು ಖುದ್ದು ಪರಿಶೀಲನೆ ನಡೆಸಿದ ವೀಣಾ ಅಚ್ಚಯ್ಯ ಅವರು, ನಿವೃತ್ತ ಪ್ರವಾಸೋದ್ಯಮ ಅಧಿಕಾರಿ ರತಿವಿನಯ್‍ಝ ಅವರ ಆಸಕ್ತಿಯಿಂದ ರೂ. 5 ಕೋಟಿ ವೆಚ್ಚದಲ್ಲಿ ಕೊಡವ ಹೆರಿಟೇಜ್ ರಸ್ತೆ ಹಾಗೂ ಕಟ್ಟಡಕ್ಕೆ ಹಣ ಕಲ್ಪಿಸಿ ವರ್ಷಗಳೇ ಉರುಳಿದರೂ ಕಾಮಗಾರಿ ಪೂರೈಸದಿರುವದು ಆತಂಕಕಾರಿ ವಿಚಾರವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಟ್ಟಡದ ಮೂಲ ನಕಾಶೆಯಂತೆ ಕಾಮಗಾರಿ ಕೈಗೊಳ್ಳದೆ ಈ ರೀತಿ ಲೋಕೋಪ ಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆ ಮಂದಿ ಕಟ್ಟಡವನ್ನು ಕೆಡವಿ ಮರು ನಿರ್ಮಾಣಕ್ಕೆ ಹೊರಟಿದೆಯೋ ಅಥವಾ ತಿಳಿಗೇಡಿಗಳು ಕೆಡವಿ ಸಾಮಗ್ರಿಗಳನ್ನು ಒಯ್ದಿದ್ದಾರೆಯೆ? ಎಂದು ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಪ್ರಸ್ತಾಪ: ಇಂದು ಕೊಡವ ಹೆರಿಟೇಜ್ ಕಟ್ಟಡ ಅಪೂರ್ಣಗೊಂಡಿರುವ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ ಬಳಿಕ, ‘ಶಕ್ತಿ’ಯೊಂದಿಗೆ ಮಾತನಾಡಿದ ವೀಣಾ ಅಚ್ಚಯ್ಯ ತಾ. 27 (ಇಂದಿನ) ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಕೋರುವದಾಗಿ ಪುನರುಚ್ಚರಿಸಿದರು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಕ್ತ ಉತ್ತರ ನೀಡುವಂತೆ ತಿಳಿಹೇಳಿದ ಅವರು, ಸಂಬಂಧಪಟ್ಟ ಖಾತೆಯನ್ನು ಹೊಂದಿರುವ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕೊಡವ ಹೆರಿಟೇಜ್ ಕಾಮಗಾರಿ ಪೂರ್ಣಗೊಳಿಸಲು ತುರ್ತು ಗಮನ ಹರಿಸಲು ಕೋರುವದಾಗಿ ಪ್ರತಿಕ್ರಿಯಿಸಿದರು.

ಒಂದು ವೇಳೆ ದುರುದ್ದೇಶದಿಂದ ಯಾರಾದರೂ ಕಟ್ಟಡ ಕೆಡವಿ ಸಾಮಗ್ರಿಗಳನ್ನು ಒಯ್ಯುವಂತಿದ್ದರೆ, ಅಧಿಕಾರಿಗಳು ಮೌನ ವಹಿಸಲು ಕಾರಣವೇನೆಂದು ಪ್ರಶ್ನಿಸಿದರಲ್ಲದೆ, ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸಲಾಗುವದು ಎಂದರು.