ಗೋಣಿಕೊಪ್ಪ ವರದಿ, ಡಿ. 26 : ಕಾಡಾನೆ ಸಮಸ್ಯೆ ಪರಿಹಾರಕ್ಕೆ ಎಲ್ಲಾರೂ ಒಂದಾಗಿ ಒಂದೇ ಕೂಗಿನಲ್ಲಿ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.ಆನೆಚೌಕೂರು ವನ್ಯಜೀವಿ ವಲಯ ಅಧಿಕಾರಿ ಕಚೇರಿ ಎದುರು ತಿತಿಮತಿ, ದೇವರಪುರ, ಬಾಳೆಲೆ ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳಿಂದ ಆಯೋಜಿಸಿದ್ದ ಕಾಡಾನೆ ನಿಯಂತ್ರಣ ಕುರಿತು ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾಡಾನೆ ನಿಯಂತ್ರಣ ಕುರಿತು ಎಷ್ಟೆ ಪ್ರತಿಭಟನೆ ನಡೆದರೂ ಜನರಿಗೆ ಸೂಕ್ತ ಸ್ಪಂದನೆ ಸಿಗದೆ ಬೇಸತ್ತು ಹೋರಾಟ ಕೈಬಿಡಬಾರದು. ಒಂದೇ ಕೂಗಿನಲ್ಲಿ ಹೋರಾಟ ನಡೆಸಬೇಕಾಗಿದೆ. ಜನರೊಂದಿಗೆ ಜನಪ್ರತಿನಿಧಿಯಾಗಿ ಹೋರಾಟ ನಡೆಸಲು ನಾನು ಸಿದ್ಧನಾಗಿದ್ದೇನೆ. ಇಲ್ಲಿ ಸಮಸ್ಯೆಯಾದಾಗ ಎಲ್ಲಾರೂ ಒಂದಾಗಿ ಬೀದಿಗಿಳಿಯಬೇಕು ಎಂದರು.
ಕಾಡಾನೆಗಳಿಗೆ ದುಡಿಯುವ ವ್ಯಕ್ತಿ ಬಲಿಯಾಗುತ್ತಿದ್ದಾನೆ, ಕುಟುಂಬ ನೆಮ್ಮದಿ ಕಳೆದುಕೊಳ್ಳುತ್ತಿದೆ. ಆದರೂ ಸಾವನಪ್ಪಿದ ಪ್ರಾಣಿಗಳಿಗೆ ಮಾತ್ರ ಸರ್ಕಾರ ಬೆಲೆ ಕೊಡುತ್ತಿದೆ. ಮಾನವ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ಮಾನವೀಯತೆಯಿಂದ ಸ್ಪಂದಿಸಬೇಕು ಎಂದರು.
ಕಾಡಾನೆಗಳು ಗ್ರಾಮಗಳಿಗೆ ನುಸುಳದಂತೆ ರೈಲ್ವೆಕಂಬಿ ಬ್ಯಾರಿಕೇಡ್ ಯೋಜನೆ ಹೆಚ್ಚು ಫಲ ಕಾಣುತಿರುವದರಿಂದ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು.
(ಮೊದಲ ಪುಟದಿಂದ) ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರೈಲ್ವೆ ಕಂಬಿ ಜೋಡಣೆಗೆ 500 ಕೋಟಿ ರೂ.ಗಳ ಪ್ರಸ್ತಾವನೆ ಇದೆ, ಇದರ ಅನುಷ್ಠಾನದಿಂದ ಮಾತ್ರ ಆನೆಗಳ ನಿಯಂತ್ರಣ ಸಾಧ್ಯ ಎಂದರು.
ಮಂಗಗಳನ್ನು ಕೊಡಗಿಗೆ ತರಬೇಡಿ
ಹೊರ ಜಿಲ್ಲೆಯಲ್ಲಿನ ಮಂಗ ಗಳನ್ನು ಕೊಡಗಿಗೆ ತಂದು ಬಿಡಲಾಗುತ್ತಿದೆ. ಇದರಿಂದ ಮಂಗಗಳ ಕಾಯಿಲೆ ಹರಡುವ ಬೀತಿ ಎದುರಾಗಿದೆ. ಹೊರಜಿಲ್ಲೆಗಳಲ್ಲಿ ಕಾಯಿಲೆಗೆ ತುತ್ತಾಗಿರುವ ಮಂಗಗಳನ್ನು ಇಲ್ಲಿ ತರುತ್ತಿರುವದು ಆತಂಕದ ವಿಚಾರ, ಇಲ್ಲಿ, ಪ್ರಕೃತಿ ವಿಕೋಪ, ಬೆಳೆ ಕಳೆದುಕೊಂಡು ಜನತೆ ಸಂಕಷ್ಟದಲ್ಲಿ ದ್ದಾರೆ, ಇದರ ನಡುವೆ ಇಂತಹ ಮಂಗ ಗಳನ್ನು ಕೊಡಗಿಗೆ ತರುವದರಿಂದ ಮಂಗ ಕಾಯಿಲೆ ಬರುವ ಆತಂಕವಿದೆ. ಮಂಗಗಳನ್ನು ತರಬೇಡಿ ಎಂದು ಅಧಿಕಾರಿಗಳಿಗೆ ಬೋಪಯ್ಯ ಸೂಚಿಸಿದರು.
ಗದ್ದೆಗಳು ಪಾಳು ಸೇರುವಂತಾಗಿದೆ.
ಕೊಡಗಿನಲ್ಲಿ ಭತ್ತದ ಗದ್ದೆ ಪಾಳು ಬಿಡಲು ಕಾಡಾನೆಗಳ ನಿರಂತರ ಸಮಸ್ಯೆ ಕಾರಣ, ಆದರೆ, ಸರ್ಕಾರಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡದಿರುವದರಿಂದ ಪಾಳು ಬಿಟ್ಟಿರುವ ಭೂಮಿ ವಶಕ್ಕೆ ಸರ್ಕಾರ ಮುಂದಾಗುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿಯನ್ನು ಅರಣ್ಯ ಇಲಾಖೆ ನೀಡಬೇಕು. ಕಾಡಾನೆಗಳಿಂದ ಭತ್ತದ ಗದ್ದೆ ಪಾಳು ಬಿಡುವಂತಾಗಿದೆ ಎಂಬವದನ್ನು ಕಂದಾಯ ಇಲಾಖೆಗೆ ತಿಳಿಸುವ ಮೂಲಕ ಭತ್ತದ ಗದ್ದೆಯನ್ನು ಉಳಿಸಿಕೊಳ್ಳುವಂತಾಗಬೇಕು ಎಂದು ಬೆಳೆಗಾರರು ಈ ಸಂದರ್ಭ ಒತ್ತಾಯಿಸಿದರು. ಬೆಳೆಗಾರ ಚೆಪ್ಪುಡೀರ ಕಿರಣ್ ಅಪ್ಪಯ್ಯ ಮಾತನಾಡಿ, ಭತ್ತ ಬೆಳೆ ಕುಂಠಿತಗೊಂಡಿರುವದರಿಂದ ನೀರು ಇಂಗದೆ, ಅಂತರ್ಜಲ ಮಟ್ಟ ಪಾತಾಳ ಸೇರುತ್ತಿದೆ. ಮತ್ತೆ ಭತ್ತ ಕೃಷಿ ಮುಂದುವರಿಸಬೇಕಾದರೆ ಕಾಡಾನೆ ಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಾಗಿದೆ ಎಂದರು.
ಈ ಸಂದರ್ಭ ಮಾಯಮುಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಲ್ಯಂಡ ಭವಾನಿ, ತಿತಿಮತಿ ಗ್ರಾ. ಪಂ. ಅಧ್ಯಕ್ಷ ಶಿವಕುಮಾರ್, ದೇವರಪುರ ಪಂಚಾ ಯಿತಿ ಪರವಾಗಿ ಮನೆಯಪಂಡ ಮಹೇಶ್, ಬಾಳೆಲೆ ವ್ಯಾಪ್ತಿಯ ಪರವಾಗಿ ಶುಭಾಶ್ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಕಾಡಾನೆ ನಿಯಂತ್ರಣಕ್ಕೆ ಒತ್ತಾಯಿಸಿದರು.
ಬಾಳೆಲೆ ವ್ಯಾಪ್ತಿಯಲ್ಲಿ ಆನೆ ಕಂದಕ ಪಾಳು ಬಿದ್ದಿರುವದೇ ಸಮಸ್ಯೆಗೆ ಕಾರಣ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ಮಾಯಮುಡಿ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆಯಿಂದ ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿ ಗಳ ಹಾಜರಾತಿಯಲ್ಲಿ ಇಳಿಮುಖ ವಾಗಿದೆ ಎಂದು ಪಂಚಾಯಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಗಮನ ಸೆಳೆದರು.
ಎಸಿಎಫ್ ಶ್ರೀಪತಿ ಮಾತನಾಡಿ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಹಂತ ಹಂತವಾಗಿ ಯೋಜನೆಗಳು ಪೂರ್ಣ ಗೊಳ್ಳಲಿದೆ ಎಂದರು. ಆನೆಚೌಕೂರು ವನ್ಯಜೀವಿ ವಲಯ ಅಧ್ಯಕ್ಷ ಶಿವಾನಂದ್ ಪ್ರತಿಕ್ರಿಯಿಸಿ, ಈಗಾಗಲೆ ಕಂಬಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಳೆಗಾರರ ಮನವಿಯನ್ನು ಮೇಲಿನ ಅಧಿಕಾರಿ ಗಳಿಗೆ ಮನದಟ್ಟು ಮಾಡಲಾಗುವದು ಎಂದರು.ಬೆಳೆಗಾರರುಗಳಾದ ಚೆಪ್ಪುಡೀರ ರಾಮಕೃಷ್ಣ ಆನೆಗಳಿಗೆ ಬೇಕಾದ ನೀರು, ಆಹಾರ ಅರಣ್ಯದಲ್ಲಿ ದೊರೆಯುತ್ತಿಲ್ಲ, ಈ ಬಗ್ಗೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಪಂಕಜ ಮಾತನಾಡಿ, ಯೋಜನೆಗಳು ಅನುಷ್ಠಾನವಾಗುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಆದಿವಾಸಿಗಳನ್ನು ಅರಣ್ಯದ ಒಳಗೆ ಹಾಕಿ ರೈಲ್ವೆ ಕಂಬಿ ನಿರ್ಮಿಸಬೇಡಿ ಎಂದು ಮನವಿ ಮಾಡಿಕೊಂಡರು.
ಹಿರಿಯ ಬೆಳೆಗಾರ ಶರಿ ಸುಬ್ಬಯ್ಯ ಮಾತನಾಡಿ, ವನ್ಯಜೀವಿ ಹಾಗೂ ಅರಣ್ಯ ಇಲಾಖೆ ಒಂದಾಗಿ ಸೇರಿ ಆನೆ ತಡೆ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕಾಗಿದೆ ಎಂದರು.
ಕೆಲವು ದಿನಗಳಿಂದ ದೇವರಪುರ, ಭದ್ರಗೋಳ, ಮಾಯಮುಡಿ ವ್ಯಾಪ್ತಿಯಲ್ಲಿ ಸಾಕಾನೆಗಳು ಕೂಡ ಬರುತ್ತಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ಸಾಮಾನ್ಯವಾಗಿ ಕಾಡಾನೆಗಳು ಕೆಸರಿನಿಂದ ಕೂಡಿರುತ್ತವೆ. ಆದರೆ, ಇತ್ತೀಷೆಗೆ 4 ಆನೆಗಳ ಹಿಂಡುಗಳಲ್ಲಿನ ಆನೆಗಳ ಮೈ ತುಂಬಾ ಸ್ವಚ್ಛದಿಂದ ಕಾಣುತ್ತಿದೆ ಎಂದರು. ಮನವಿಗೆ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಮುಂದಿನ 10 ದಿನಗಳಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಮೂಲಕ ಗಮನ ಸೆಳೆಯಲು ನಿರ್ಧರಿಸಲಾಯಿತು.
ಜಿ.ಪಂ. ಸದಸ್ಯರುಗಳಾದ ಸಿ. ಕೆ. ಬೋಪಣ್ಣ, ಶಶಿ ಸುಬ್ರಮಣಿ, ಬಾನಂಡ ಪ್ರಥ್ಯು, ರೈತ ಸಂಘ ಕಾರ್ಯದರ್ಶಿ ಸುಜಯ್ ಬೋಪಯ್ಯ ಇವರುಗಳು ಮಾತನಾಡಿದರು. ಈ ಸಂದರ್ಭ ತಿತಿಮತಿ ಆರ್‍ಎಫ್‍ಒ ಅಶೋಕ್, ಪೊನ್ನಂಪೇಟೆ ಆರ್‍ಎಫ್‍ಒ ಗಂಗಾಧರ್, ವೃತ್ತ ನಿರೀಕ್ಷಕ ದಿವಾಕರ್, ಉಪಸ್ಥಿತರಿದ್ದರು.