ಸೋಮವಾರಪೇಟೆ, ಡಿ. 26: ಕೃಷಿ ಇಲಾಖೆಯ ವತಿಯಿಂದ ರೈತ ದಿನಾಚರಣೆ ಹಾಗೂ ಆತ್ಮ ಯೋಜನೆಯಡಿಯಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಬಗ್ಗೆ ರೈತರೊಂದಿಗಿನ ಸಂವಾದ ಕಾರ್ಯಕ್ರಮ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿ, ಸರಕಾರ ಕೃಷಿ ಇಲಾಖೆಯ ಮೂಲಕ ರೈತರಿಗೆ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ರೈತ ದಿನದÀ ಮಹತ್ವವನ್ನು ವಿವರಿಸಿದರು. ಇಲಾಖೆಯಲ್ಲಿ ವಿವಿಧ ಯೋಜನೆಯ ಮೂಲಕ ರೈತರಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಹಾಗೂ ಲಕ್ಷ್ಮೀಕಾಂತ್‍ರವರುಗಳು ಕಾಫಿ ಬೆಳೆಗೆ ತಗಲುವ ಕೀಟ ಬಾಧೆ, ರೋಗಬಾಧೆ ಹಾಗೂ ಇವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ತಿಳಿಸಿದರು. ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕಿನ ಪ್ರಗತಿಪರ ಕೃಷಿಕರಾದ ಜೋಯಪ್ಪ ಹಾಗೂ ಪ್ರಮೀಳ ಅವರುಗಳು ಕೃಷಿಯಲ್ಲಿ ತಮ್ಮ ಅನುಭವಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಕೃಷಿ ಅಧಿಕಾರಿ ನವ್ಯ ನಾಣಯ್ಯ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಜಿ.ಜೆ. ಪಲ್ಲವಿ ಉಪಸ್ಥಿತರಿದ್ದರು.