ಸಿದ್ದಾಪುರ, ಡಿ. 26: ಹಗಲಿರುಳೆನ್ನದೆ ದಿನದ 24 ಗಂಟೆಯೂ ಕೂಡ ಸಾರ್ವಜನಿ ಕರಿಗಾಗಿ, ಸಾರ್ವಜನಿಕರ ಆಸ್ತಿ, ಪಾಸ್ತಿ, ಪ್ರಾಣದ ರಕ್ಷಣೆಗಾಗಿ ದುಡಿ ಯುತ್ತಿರುವ ಸಿದ್ದಾಪುರದ ಆರಕ್ಷಕ ಸಿಬ್ಬಂದಿ ಹಾಗೂ ಅವರ ಕುಟುಂಬ ಗಳಿಗೆ ಸೂಕ್ತ ವಸತಿ ಗೃಹಗಳಿಲ್ಲದೆ ಶೋಚನೀಯವಾಗಿರುವ ದೃಶ್ಯ ಕಂಡುಬರುತ್ತಿದೆ.
ಪೊಲೀಸ್ ಇಲಾಖೆಯು ಕೊಡಗು ಜಿಲ್ಲೆಯಲ್ಲಿ ಗುರುತಿಸ ಲಾಗಿರುವ, ಬೆರಳೆಣಿಕೆಯ ಸೂಕ್ಷ್ಮ ಪ್ರದೇಶಗಳಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ, ಈ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಗಳ ಅವಶ್ಯಕತೆ ಎಷ್ಟು ಎಂಬ ದನ್ನು ಅಂದಾಜಿಸಬಹುದಾಗಿದೆ. ಗುಡ್ಡಗಾಡು ಪ್ರದೇಶಗಳಾಗಿರು ವದರಿಂದ ಸಿದ್ದಾಪುರ ಠಾಣಾ ವ್ಯಾಪ್ತಿಯು ಭೌಗೋಳಿಕ ವಾಗಿ ದೊಡ್ಡದಾಗಿದೆ. ಜನಸಂಖ್ಯೆಯೂ ಹೆಚ್ಚಳವಾಗಿದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಪಾತ್ರ ಅಪಾರವಾಗಿದೆ. ಆದರೆ ವಿಪರ್ಯಾಸವೆಂದರೆ ವಿಸ್ತಾರವಾದ ಬೌಗೋಳಿಕ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಳಿಗೆ ಸುರಕ್ಷಿತವಾದ ವಸತಿ ಗೃಹಗಳಿಲ್ಲದೆ, ಪಾಳುಬಿದ್ದಿರುವ ಪುರಾತನ ಕಟ್ಟಡದಲ್ಲೇ ಜೀವಭಯದಿಂದ ದಿನದೂಡುವ ದೃಶ್ಯ ಕಂಡುಬರುತ್ತಿದೆ. ಸಾರ್ವಜನಿಕರ ಆಸ್ತಿ, ಪಾಸ್ತಿಯ ರಕ್ಷಣೆಗೆ ಮುಂದಾಗುವ ಪೊಲೀಸ್ ಸಿಬ್ಬಂದಿಗಳಿಗೆ, ಕುಸಿಯುವ ಹಂತದಲ್ಲಿರುವ ತಮ್ಮ ವಸತಿ ಗೃಹಗಳ ವಾಸದಿಂದ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪುರಾತನ ಕಟ್ಟಡ: ಸಿದ್ದಾಪುರದ ಪೊಲೀಸ್ ವಸತಿ ಗೃಹ ಪುರಾತನ ಕಟ್ಟಡವಾಗಿದ್ದು, ಪ್ರತೀ ವರ್ಷದ ಗಾಳಿ-ಮಳೆಗೆ ಗೋಡೆ ಕುಸಿಯುವದು, ಹೆಂಚುಗಳು ಹಾನಿಗೆ ಒಳಗಾಗುವದು, ಮಾಡು ಸೋರುವದು ಈ ರೀತಿ ಸಂಪೂರ್ಣ ಮಳೆ, ಗಾಳಿಯೊಡನೆ ಹೋರಾಡಿರುವ ವಸತಿ ಗೃಹಗಳು ಕಳೆದ ಕೆಲವು ವರ್ಷಗಳಿಂದ ಸಮಸ್ಯೆಗೆ ಸಿಲುಕಿಕೊಂಡು ಕುಸಿಯುವ ಹಂತಕೆ ತಲಪಿದೆ.
ಸೂಕ್ತ ದುರಸ್ತಿ ಕಾಣದೆ, ಗೋಡೆಗಳಲ್ಲಿ ದೊಡ್ಡದಾಗಿ ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ. ಗಾಳಿ, ಮಳೆ, ಬಿಸಿಲಿನಿಂದ ಕಟ್ಟಡ ತನ್ನ ಸಾಮಥ್ರ್ಯವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಾಗಿಲು ಹಾಗೂ ಕಿಟಕಿಗಳು ಮುಚ್ಚಲು ಸಾಧ್ಯವಾಗದೆ, ಚಳಿ, ಗಾಳಿ, ಮಳೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗದೆ ನರಳುತ್ತಿದೆ ಪೊಲೀಸ್ ಕುಟುಂಬಗಳು.
ವಿಷಜಂತುಗಳಿಗೆ ಆವಾಸ ಸ್ಥಾನ: ಪುರಾತನ ಕಾಲದಲ್ಲಿ ನಿರ್ಮಿಸ ಲಾಗಿರುವ ಪೊಲೀಸ್ ವಸತಿ ಗೃಹವು ಕೇವಲ ಪೊಲೀಸರ ವಾಸದಿಂದ ಮಾತ್ರ ಸುರಕ್ಷಿತವಾಗಿದೆಯೇ ಹೊರತು, ಉಳಿದಂತೆ ವಸತಿ ಗೃಹವು ತಡೆಗೋಡೆಗಳಿಲ್ಲದೆ, ಕಾಡು ಪೊದೆಗಳಿಂದ ಕೂಡಿದೆ. ಅಲ್ಲದೆ ಹೆಗ್ಗಣಗಳ ಬೃಹತ್ ಗುಂಡಿಗಳೊಂದಿಗೆ ವಿಷಜಂತುಗಳ ಆವಾಸ ಸ್ಥಾನವಾಗಿದ್ದು ಮುಂದಿನ ದಿನಗಳಲ್ಲಿ ವಿಷ ಜಂತುಗಳಿಂದ ಅಪಾಯ ಎದುರಾಗುವದರಲ್ಲಿ ಸಂಶಯವಿಲ್ಲ.
ದಿನದ 24 ಗಂಟೆಯೂ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರನ್ನು ನೇಮಿಸಿಕೊಳ್ಳುವ ಸರಕಾರ ಹಾಗೂ ಜಿಲ್ಲಾಡಳಿತ. ನೇಮಿಸಿಕೊಳ್ಳುವ ಸಿಬ್ಬಂದಿಗಳ ಹಾಗೂ ಅವರ ಕುಟುಂಬಗಳ ರಕ್ಷಣೆಯ ನಿಟ್ಟಿನಲ್ಲಿ, ಕನಿಷ್ಟ ಸೌಲಭ್ಯಗಳೊಂದಿಗಿನ ವಸತಿ ಗೃಹವನ್ನು ನಿರ್ಮಿಸಿಕೊಡುವತ್ತ ಗಮನ ಹರಿಸಿ ಪೊಲೀಸ್ ವಸತಿ ಗೃಹವನ್ನು ದುರಸ್ತಿಪಡಿಸಿ ಸಮಸ್ಯೆಗೆ ಹಿರಿಯ ಅಧಿಕಾರಿಗಳು ಸ್ಪಂದಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಚಿತ್ರ ವರದಿ: ವಾಸು.