ಕೂಡಿಗೆ, ಡಿ. 26: ಪುರಾತನ ಹಿನ್ನಲೆಯುಳ್ಳ ಕೂಡಮಂಗಳೂರು ಗ್ರಾ.ಪಂ. ವ್ಯಾಪ್ತಿಯ ನೂರಾರು ರೈತರ ಬಾಳಿಗೆ ನೀರು ಒದಗಿಸುವ ಆನೆಕೆರೆಗೆ ತಡೆಗೋಡೆ ನಿರ್ಮಿಸಲು ಹಾಗೂ ಒತ್ತುವರಿ ತೆರವಿಗಾಗಿ ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ..

ಈ ಕೆರೆಯಿಂದ ನೂರಾರು ಏಕರೆ ಪ್ರದೇಶದ ರೈತರಿಗೆ ಬೇಸಾಯ ಮಾಡಲು ಅನುಕೂಲವಾಗುತಿತ್ತು. ಅಲ್ಲದೇ ಈ ವ್ಯಾಪ್ತಿಯಲ್ಲಿ ಕೊಳವೆ ಬಾವಿ ತೆಗೆದು ಬೇಸಾಯ ಮಾಡುತ್ತಿದ್ದ ರೈತರಿಗೆ ಇದರ ತೇವಾಂಶದಿಂದ ಕೊಳವೆ ಭಾವಿ ಇಂಗದ ಹಾಗೇ ಅನುಕೂಲವಾಗುತಿತ್ತು. ಆದರೆ ಆನೆಕೆರೆ ಪ್ರದೇಶವು ನಕ್ಷೆಯಲ್ಲಿ ಅತೀ ವಿಸ್ತಾರವಾಗಿದ್ದು, ಇದೀಗ ಒತ್ತುವರಿಯಾಗಿದೆ.

ಈ ಕೆರೆಯ ಸಮೀಪದ ರಸ್ತೆಯು ಕೂಡಿಗೆಯಿಂದ ಹಾರಂಗಿಗೆ ತೆರಳುವ ರಸ್ತೆಗೆ ಹತ್ತಿರ ವಾಗಿದ್ದು, ಕೆರೆಗೆ ಹೊಂದಿಕೊಂಡಂತೆ ರಸ್ತೆಯಿ ರುವದರಿಂದ ಈ ರಸ್ತೆಗೆ ತಡೆಗೋಡೆಯನ್ನು ನಿರ್ಮಿಸಬೇಕು ಎಂಬದು ಇಲ್ಲಿಯ ಜನರ ಆಗ್ರಹವಾಗಿದೆ.

ಗ್ರಾಮ ಪಂಚಾಯಿತಿ ಮುಖೇನ ಅನೇಕ ಬಾರಿ ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಂಡು ಸಂಬಂಧಪಟ್ಟ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಗೆ ಪಂಚಾಯಿತಿಯಿಂದ ಹಾಗೂ ಸಾರ್ವಜನಿಕರಿಂದ ಪತ್ರ ವ್ಯವಹಾರ ನಡೆಸಿದರೂ ಯಾವದೇ ಕ್ರಮ ಕೈಗೊಂಡಿರುವದಿಲ್ಲ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಎಚ್ಚೆತ್ತುಕೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಕಾರ್ಯೋನ್ಮುಕರಾಗಬೇಕು ಎಂದು ಈ ವ್ಯಾಪ್ತಿಯ ನೂರಾರು ಸಾರ್ವಜನಿಕರು ಎಚ್ಚರಿಸಿದ್ದಾರೆ.