ಗೋಣಿಕೊಪ್ಪಲು, ಡಿ. 24: ಕೊಡಗು ಜಿಲ್ಲೆಯಲ್ಲಿ ವ್ಯಾಪಾರೋದ್ಯಮ ಬೆಳೆಯಲು ಚೇಂಬರ್ಸ್ ಆಫ್ ಕಾಮರ್ಸ್‍ನ ಸಹಕಾರ ಬಹಳಷ್ಟಿದೆ ಎಂದು ರಾಜ್ಯ ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಅಭಿಪ್ರಾಯಪಟ್ಟರು.ಮೈಸೂರು ಗೋಣಿಕೊಪ್ಪ ಮುಖ್ಯ ರಸ್ತೆಯ ಹರಿಶ್ಚಂದ್ರಪುರದಲ್ಲಿ ನೆಲೆ ನಿಂತಿರುವ ಗೋಣಿಕೊಪ್ಪಲುವಿನ ಸ್ಥಾನೀಯ ಚೇಂಬರ್ಸ್ ಆಫ್ ಕಾಮರ್ಸ್‍ನ ಮೂಲಕ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿರುವ ಎರಡು ಅಂತಸ್ತಿನ ವಾಣಿಜ್ಯ ಸಂಕೀರ್ಣ ಹಾಗೂ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಗೋಣಿಕೊಪ್ಪಲುವಿನ ವರ್ತಕರ ಸಹಕಾರದಿಂದ ಸುಮಾರು ರೂ. 36 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ವರ್ತಕರ ಸಹಕಾರ ಮೆಚ್ಚುವಂತಹದ್ದು ಎಂದರು. ಜಿಲ್ಲೆಯಲ್ಲಿ ಅಭಿವೃದ್ಧಿ ಪೂರಕವಾದ ವಾಣಿಜ್ಯೋದ್ಯಮಕ್ಕೆ ಯಾರು ವಿರೋಧ ಮಾಡಬಾರದು ಕೊಡಗು ಜಿಲ್ಲೆಯಲ್ಲಿ ಸಣ್ಣ ಸಣ್ಣ ಉದ್ಯಮಗಳಿಂದ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿವೆ. ಸ್ಥಳೀಯ ವಿದ್ಯಾವಂತ ಯುವಕ ಯುವತಿಯರು (ಮೊದಲ ಪುಟದಿಂದ) ಹೊರ ಜಿಲ್ಲೆಯ ನಗರ ಪ್ರದೇಶಗಳಿಗೆ ವಲಸೆ ಹೋಗುವ ಬದಲು ಜಿಲ್ಲೆಯಲ್ಲಿಯೇ ಉದ್ಯಮ ನಡೆಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಪ್ರಸ್ತುತವಿರುವ ವಾಣಿಜ್ಯೋದ್ಯಮಗಳ ಜಿಎಸ್‍ಟಿ ಶೇ.18ಕ್ಕೆ ನಿಲ್ಲಬೇಕು. ಮುಂದಿನ ದಿನದಲ್ಲಿ ಜಿಎಸ್‍ಟಿ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಲಾಗುವದು. ಮಹಿಳೆಯರಿಗೆ ಸರ್ಕಾರದಿಂದ ಉದ್ಯಮ ನಡೆಸಲು ವಿಪುಲ ಅವಕಾಶವಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು ಕೊಡಗು ಜಿಲ್ಲೆಯ ಕುಶಾಲನಗರದವರೆಗೆ ರೈಲು ಮಾರ್ಗ ಆಗಲೇಬೇಕು. ಇದರಿಂದ ವಾಣೀಜ್ಯೋದ್ಯಮಕ್ಕೆ ಬಹಳ ಅನುಕೂಲವಾಗಲಿದೆ. ಸ್ಥಳೀಯ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಲಭಿಸಲು ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಗೋಣಿಕೊಪ್ಪಲುವಿನ ಕುಕೂನ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಮಾರಂಭದ ಅಧ್ಯಕ್ಷತೆಯನ್ನು ವಾಣಿಜ್ಯ ಕೈಗಾರಿಕೆ ಸಂಸ್ಥೆ ಗೋಣಿಕೊಪ್ಪ ಸ್ಥಾನೀಯ ಸಮಿತಿಯ ಮೇನೆಜಿಂಗ್ ಟ್ರಸ್ಟಿ ಹಾಗೂ ಗೋಣಿಕೊಪ್ಪ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ವಹಿಸಿದ್ದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫಲ ಅವಕಾಶವಿದೆ ಇಲ್ಲಿಯ ಆಚಾರ ವಿಚಾರ ಪದ್ಧತಿ ಪರಂಪರೆಗೆ ಧಕ್ಕೆ ಆಗದ ರೀತಿಯಲ್ಲಿ ಕಾರ್ಯ ನಿರ್ವಹಣೆಯಾಗಬೇಕು. ಪ್ರಕೃತಿ ವಿಕೋಪದಿಂದ ಇತ್ತೀಚೆಗೆ ಜಿಲ್ಲೆಯು ಚೇತರಿಸಿಕೊಳ್ಳುತ್ತಿವೆ. ಪ್ರವಾಸಿಗರು ಜಿಲ್ಲೆಯತ್ತ ಆಗಮಿಸುತ್ತಿದ್ದಾರೆ. ಕೃಷಿಯೊಂದಿಗೆ ಕೃಷಿಯೇತರ ವಾಣಿಜ್ಯೋದ್ಯಮಕ್ಕೆ ಪ್ರೋತ್ಸಾಹ ಸಿಗುವಂತಾಗಬೇಕು ಎಂದರು. ಮುಂದಿನ ಸಾಲಿನ ಅನುದಾನದಲ್ಲಿ ಸಾಧ್ಯವಾದಷ್ಟು ಮಂಜೂರಾತಿಯನ್ನು ಕಟ್ಟಡದ ಅಭಿವೃದ್ಧಿಗೆ ನೀಡುವದಾಗಿ ಬೋಪಯ್ಯ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಜಿಲ್ಲಾ ಚೇಂಬರ್ಸ್ ಆಫ್ ಕಾಮರ್ಸ್‍ನ ಸಂಕೀರ್ಣ ಟ್ರಸ್ಟ್‍ನ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ವೀರಾಜಪೇಟೆ ತಾಲೂಕು ಮರ್ಚೆಂಟ್ಸ್ ಕೋ ಆಪÀರೇಟಿವ್ ಸೊಸೈಟಿಯ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ, ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದ ಸಂಚಾಲಕ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಗೋಣಿಕೊಪ್ಪ ಚೇಂಬರ್‍ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರ ಸುಂದರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಗೋಣಿಕೊಪ್ಪ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಫ್‍ಕೆಸಿಸಿಐನ ರಾಜ್ಯ ಉಪಾಧ್ಯಕ್ಷ ಡಾ. ರವೀಂದ್ರಸ್ವಾಮಿ, ನಿರ್ದೇಶಕ ಗಣೇಶ್ ಸೇರಿದಂತೆ ಚೇಂಬರ್‍ನ ಕಾರ್ಯದರ್ಶಿ ತೆಕ್ಕಡ ಕಾಶಿ, ಖಜಾಂಜಿ ಮನೋಹರ್ ನಿರ್ದೇಶಕರಾದ, ನಾಸೀರ್, ಉಮ್ಮರ್, ರಾಜಶೇಖರ್, ಮುಂತಾದವರು ಉಪಸ್ಥಿತರಿದ್ದರು. ಗೋಣಿಕೊಪ್ಪ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಎಂ.ಪಿ. ಕೇಶವ್ ಕಾಮತ್ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚೇಂಬರ್‍ನ ಪದಾಧಿಕಾರಿ ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. ನಿರ್ದೇಶಕಿ ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು.

- ಹೆಚ್.ಕೆ.ಜಗದೀಶ್