ಕುಶಾಲನಗರ, ಡಿ. 24: ಕುಶಾಲನಗರದ ಖಾಸಗಿ ವೈದ್ಯ ಡಾ.ದಿಲೀಪ್ ಕುಮಾರ್ ಅವರು ಉಲ್ಲಾಳದ ಟಾರ್ಗೆಟ್ ಟೀಂ ಗೆ ಬಲಿಯಾಗಿರುವ ಬಲವಾದ ಸಂದೇಹ ಉಂಟಾಗಿರುವ ಬೆನ್ನಲ್ಲೇ ಮೈಸೂರು-ಕೊಡಗು ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ.ತಾ. 9 ರಂದು ತನ್ನ ಮನೆಯಲ್ಲಿ ಬರ್ಬರವಾಗಿ ಹತ್ಯೆಗೊಳಗಾದ ಕುಶಾಲನಗರದ ವೈದ್ಯ ಡಾ.ದಿಲೀಪ್ ಪ್ರಕರಣ ಕೆಲವು ದಿನಗಳ ಕಾಲ ನಿಗೂಢವಾಗುವದ ರೊಂದಿಗೆ ಮೈಸೂರು ಜಿಲ್ಲಾ ಪೊಲೀಸರ ಕಾರ್ಯಾಚರಣೆ ತಂಡ ಪ್ರಮುಖ ಸುಳಿವು ಪತ್ತೆ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಮಂಗಳೂರಿನ ಮೂವರನ್ನು ವಶಕ್ಕೆ ಪಡೆದುಕೊಂಡಿದೆ.2016ರ ನವೆಂಬರ್‍ನಲ್ಲಿ ಕುಶಾಲನಗರ ಸಮೀಪದ ಹೊಸಪಟ್ಟಣ ಕಾಫಿ ಬೆಳೆಗಾರ ಶಿವಕುಮಾರ್ ಅವರ ಮನೆ ದರೋಡೆ ಮಾಡಿದ್ದ ತಂಡವೇ ಈ ಕೃತ್ಯ ಎಸಗಿರುವ ಸಾಧ್ಯತೆ ಕಂಡುಬಂದಿದ್ದು ಟಾರ್ಗೆಟ್ ಟೀಂನ ಕೊಡಗು ಜಿಲ್ಲೆಯ ಕಿಂಗ್‍ಪಿನ್ ಮಡಿಕೇರಿಯ ಆಟೋ ಡ್ರೈವರ್ ಕೃಷ್ಣ ಸೇರಿದಂತೆ ಮಂಗಳೂರು, ಕುಶಾಲನಗರದ ಕೆಲವು ಕಾಣದ ಕೈಗಳು ವೈದ್ಯರನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಲಕ್ಷಾಂತರ ಹಣದ ಡೀಲ್ ಕುದುರಿಸುವಲ್ಲಿ ಯಶಸ್ವಿಯಾಗಿವೆ ಎನ್ನಲಾಗಿದೆ.
2016ರ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾರ್ಗೆಟ್ ಟೀಂನ ನಾಲ್ವರನ್ನು ಬಂಧಿಸುವದ ರೊಂದಿಗೆ ಈ ಪ್ರಕರಣವನ್ನು ಬೇಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿತ್ತು. ಆದರೆ ಶಿವಕುಮಾರ್ ಅವರಿಗೆ ಸೇರಿದ ಬಂದೂಕು ಪತ್ತೆ ಆಗಿರಲಿಲ್ಲ.
ದಕ್ಷಿಣ ಕನ್ನಡದ ಮಂಗಳೂರು ಸಮೀಪದ ಉಲ್ಲಾಳದ ಬೈಲ್ ಎಂಬಲ್ಲಿ ನೆಲೆಕಂಡಿರುವ ಕುಖ್ಯಾತ ಟಾರ್ಗೆಟ್ ಟೀಂಗೆ ಡಾ.ದಿಲೀಪ್ ಬಲಿಯಾಗಿದ್ದಾರೆ ಎನ್ನುವದು ‘ಶಕ್ತಿ’ಗೆ ಬಹುತೇಕ ಖಚಿತಗೊಂಡಿದೆ. ಟಾರ್ಗೆಟ್ ರಿಯಲ್ ಎಸೇಟ್ ಟೀಂ ತಂಡದಲ್ಲಿ ಸುಮಾರು 20 ಜನ ಸದಸ್ಯರಿದ್ದು ತಂಡದ ಮುಖ್ಯಸ್ಥ ಇಲಿಯಾಸ್ ಎಂಬಾತ ಕಳೆದ ವರ್ಷ ಹತ್ಯೆಗೊಳಗಾಗಿದ್ದ. ನಂತರ ಇದೇ ತಂಡದ ನಾಯಕತ್ವ ವಹಿಸಿದ ಫಾರುಕ್, ಸುರ್ಮ ಇಮ್ರಾನ್ ಇನ್ನೋರ್ವ ಅಲ್ತಾಫ್ ಎಂಬವರುಗಳು ಭೂಗತರಾಗಿದ್ದು ಇನ್ನಿಬ್ಬರು ಸದಸ್ಯರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿ ಯಾಗಿದ್ದಾರೆ ಎನ್ನುವ ಮಾಹಿತಿ `ಶಕ್ತಿ’ಗೆ ತಿಳಿದುಬಂದಿದೆ.
ಉಳಿದಂತೆ ಜಾಫರ್ ಸಾದಿಕ್,
(ಮೊದಲ ಪುಟದಿಂದ) ಫಯಾಜ್ ಸೇರಿದಂತೆ ಇನ್ನೋರ್ವ ಮಡಿಕೇರಿಯ ಕೃಷ್ಣ ಎಂಬಾತನೊಂದಿಗೆ ಸಂಚು ಹೂಡಿ ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ ಸುತ್ತಮುತ್ತ ಹಲವರನ್ನು ಟಾರ್ಗೆಟ್ ಮಾಡುವಲ್ಲಿ ಹೊಂಚು ಹಾಕುವ ವ್ಯವಸ್ಥಿತ ಪಿತೂರಿ ನಡೆಸುತ್ತಿರುವ ಈ ತಂಡ ಡಾ.ದಿಲೀಪ್ ಹತ್ಯೆಯ ರೂವಾರಿಗಳು ಎನ್ನಲಾಗಿದೆ. ವೈಯಕ್ತಿಕ ದೌರ್ಲಬ್ಯ ಹೊಂದಿರುವ ಶ್ರೀಮಂತ ಉದ್ಯಮಿಗಳನ್ನು ಈ ತಂಡದ ಸದಸ್ಯರು ಟಾರ್ಗೆಟ್ ಮಾಡುತ್ತಿದ್ದು ಹಲವು ದರೋಡೆ, ಕೊಲೆ ಸೇರಿದಂತೆ ರಾಜಿ ತೀರ್ಮಾನ ವ್ಯವಹಾರಗಳನ್ನು ಕುದುರಿಸುವದು ಇವರ ಕಾಯಕವಾಗಿದೆ. ಉದ್ಯಮಿಗಳ ಅಪಹರಣ, ಹತ್ಯೆಗೆ ಸುಪಾರಿ, ಹಣಕಾಸು ಲೇವಾದೇವಿ ವ್ಯವಹಾರ ಸೆಟಲ್‍ಮೆಂಟ್ ಮೂಲಕ ಕೋಟಿಗಟ್ಟಲೆ ಹಣ ಗಳಿಸುವುದು ಇವರ ದಂಧೆಯಾಗಿದೆ.
ಕಳೆದ 2005 ರಿಂದ ಈ ತಂಡ ಕೊಡಗು, ಕಾಸರಗೋಡು, ದಕ್ಷಿಣ ಕನ್ನಡದ ವ್ಯಾಪ್ತಿಯ ಹಲವು ಉದ್ಯಮಿಗಳನ್ನು ತಮ್ಮ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದು ತಂಡದ ಕೆಲವು ಸದಸ್ಯರು ಈಗಾಗಲೆ ಮಂಗಳೂರು ಮತ್ತು ಬೆಂಗಳೂರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇವರ ಚಲನವಲನಗಳು ಮತ್ತು ಕೃತ್ಯಗಳ ಬಗ್ಗೆ ನಿಗಾವಹಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಿಶೇಷ ಪೊಲೀಸರ ತಂಡವನ್ನೇ ನಿಯೋಜಿಸಿದೆ ಎಂದು ಮಂಗಳೂರು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಕೊಡಗಿನ ಮಡಿಕೇರಿ ಮತ್ತು ಕುಶಾಲನಗರದಲ್ಲಿ ಕೂಡ ಇವರ ಅಡ್ಡೆಯೊಂದು ಕೆಲಸ ನಿರ್ವಹಿಸುತ್ತಿದ್ದು ಕುಶಾಲನಗರದ ಕೆಲವು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳು ಈ ದಂಧೆಯಲ್ಲಿ ಕೈಜೋಡಿಸುತ್ತಿರುವದು ಕೂಡ ಬೆಳಕಿಗೆ ಬಂದಿದೆ.
ಈ ತಂಡ ಶ್ರೀಮಂತ ಕುಳಗಳ ಪತ್ತೆ ಮಾಡುವದರೊಂದಿಗೆ ಅವರ ದೌರ್ಬಲ್ಯ ಗುರುತಿಸಿ ನಂತರ ಬ್ಲಾಕ್ ಮೇಲ್ ಮಾಡುವದು. ಅಂತಿಮವಾಗಿ ಹತ್ಯೆ ಮಾಡಿ ಪ್ರಕರಣಕ್ಕೆ ಇತಿಶ್ರೀ ಹಾಡುವ ಪ್ರಯತ್ನಕ್ಕೆ ಕೈ ಹಾಕುತ್ತದೆ ಎನ್ನಲಾಗಿದ್ದು, ದಕ್ಷಿಣ ಕನ್ನಡದಲ್ಲಿ ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ಕೆಲ ಚಟಕ್ಕೆ ಒಳಗಾಗಿರುವ ಬಹುತೇಕ ಉದ್ಯಮಿಗಳನ್ನು ಬ್ಲಾಕ್ ಮೇಲ್ ಮಾಡುವ ಮೂಲಕ 30 ರಿಂದ 50 ಲಕ್ಷ ರೂ.ಗಳ ತನಕ ಹಣದ ಬೇಡಿಕೆ ಯಿಡುವದು ಈ ತಂಡದ ಕಾಯಕವಾಗಿದೆ ಎನ್ನುವ ಅಂಶ ಹೊರಬಿದ್ದಿದೆ.
‘ಟಾರ್ಗೆಟ್ ಟೀಂ’ನ ದಂಧೆಗೆ ಕೊಡಗು ಜಿಲ್ಲೆಯಲ್ಲಿ ಕೆಲವು ಏಜೆಂಟರುಗಳಿದ್ದು ಅವರ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ.
ಕುಶಾಲನಗರ ಸಮೀಪ ಕೊಪ್ಪ ಗ್ರಾಮದ ಮನೆಯಲ್ಲಿ ಡಿಸೆಂಬರ್ 9ಕ್ಕೆ ನಡೆದ ಡಾ. ದಿಲೀಪ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಮೈಸೂರು-ಕೊಡಗು-ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಮಡಿಕೇರಿ, ಮಂಗಳೂರಿನ ಮೂವರನ್ನು ವಶಕ್ಕೆ ಪಡೆದು ಹಲವು ವ್ಯಕ್ತಿಗಳ ವಿಚಾರಣೆ ಕೈಗೊಂಡಿದ್ದಾರೆ. ಕುಶಾಲನಗರದಲ್ಲಿ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡವೊಂದು ಮಂಗಳೂರಿನಲ್ಲಿ ಬೀಡುಬಿಟ್ಟಿದ್ದು ಇನ್ನೂ ಹಲವರನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸುತ್ತಿದೆ.