ಶನಿವಾರಸಂತೆ, ಡಿ. 24: ಪ್ರತಿ ಮಗುವೂ ವಿದ್ಯಾವಂತನಾದರೆ ಆ ಮಗುವಿನ ಭವಿಷ್ಯ ಉಜ್ವಲವಾಗುತ್ತದೆ. ಆದರೆ, ಅದಕ್ಕೆ ಪೂರಕ ವಾತಾವರಣ ಕಲ್ಪಿತವಾಗಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಸಮೀಪದ ಕೊಡ್ಲಿಪೇಟೆಯ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಕಾಲೇಜು ಆವರಣದಲ್ಲಿ ನಡೆದ ಅವರ ರೂ.15 ಲಕ್ಷ ಅನುದಾನದಿಂದ ನಿರ್ಮಿಸಲ್ಪಟ್ಟ “ಕೊಡ್ಲಿಪೇಟೆ ವಿದ್ಯಾಸಂಸ್ಥೆ’’ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶ್ರದ್ಧೆ ಮತ್ತು ಚಾಣಾಕ್ಯತನವಿರುವ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ ಎಂದರು. ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿ, ಭಾರತದಲ್ಲಿ ವಿದ್ಯೆ ಕಲಿಸುವದೇ ಒಂದು ಸಂಪ್ರದಾಯವೆನಿಸಿದೆ. ಅನುದಾನ ಸದ್ಬಳಕೆಯಾಗಬೇಕು. ಪ್ರಜಾತಂತ್ರದಲ್ಲಿ ನಿರ್ಭಯ ವ್ಯಕ್ತಿತ್ವ ಮುಖ್ಯ ಎಂದರು.ಬೆಂಗಳೂರಿನ ಉದ್ಯಮಿ ವಿದ್ಯಾಸಾಗರ್ ಮಾತನಾಡಿ, ಪಠ್ಯ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಇಂದು ಯೋಗ ಶಿಕ್ಷಣವೂ ಅಗತ್ಯ ಎಂದು ಹೇಳಿದರಲ್ಲದೇ ವಿದ್ಯಾಸಂಸ್ಥೆಗೆ ರೂ.1 ಲಕ್ಷ ಕೊಡುಗೆ ನೀಡಿದರು.

ಮಾಜಿ ಸಚಿವ ಯಂ.ಸಿ. ನಾಣಯ್ಯ ಮಾತನಾಡಿ, ಪ್ರತಿ ಮಗುವೂ ಬುದ್ಧಿವಂತರಾಗಿದ್ದರೂ ಅವಕಾಶ ವಂಚಿತರಾಗಿರುತ್ತಾರೆ. ವಿದ್ಯಾಸಂಸ್ಥೆಯಲ್ಲಿ ರಾಜಕಾರಣ ಸಲ್ಲದು.ಪ್ರತಿ ಮಗುವಿನ ಮನೆ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಂಡು ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ,

(ಮೊದಲ ಪುಟದಿಂದ) ಆಂಗ್ಲ ಭಾಷಾ ಸುಳಿಯಲ್ಲೂ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಪ್ರಗತಿ ಸಾಧಿಸಿವೆ ಎಂದರಲ್ಲದೇ ತಮ್ಮ ಅನುದಾನದಲ್ಲಿ ಸ್ವಲ್ಪ ಭಾಗವನ್ನು ವಿದ್ಯಾಸಂಸ್ಥೆಗೆ ನೀಡುವ ಭರವಸೆಯಿತ್ತರು.

ಸಮಾರಂಭದಲ್ಲಿ ಬೆಂಗಳೂರಿನ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್, ಡಾ. ಎ.ಎಸ್.ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಕೊಡ್ಲಿಪೇಟೆ ನಾಗರಿಕರು ಪಟ್ಟಣದ ಸಮಸ್ಯೆಯ ಹಾಗೂ ಅಭಿವೃದ್ಧಿಯ ಬಗ್ಗೆ ಸರ್ಕಾರಿ ಅಭಿಯೋಜಕ ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್. ಚಂದಮೌಳಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂಬ ಭಾವನೆಯಿಂದ ವಿದ್ಯಾಸಂಸ್ಥೆ ನಿರ್ಮಿಸಲಾಗಿದೆ.

ಚಲನಚಿತ್ರ ನಟ ಜೈಜಗದೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್, ವಿದ್ಯಾಸಂಸ್ಥೆ ಗೌರವಧ್ಯಕ್ಷ ಎಸ್.ಎಸ್. ನಾಗರಾಜ್, ಉಪಾಧ್ಯಕ್ಷ ಸಿ.ವಿ.ಶಂಭುಲಿಂಗಪ್ಪ, ಕಾರ್ಯದರ್ಶಿ ಕೆ.ಎಸ್. ಪರಮೇಶ್, ಖಜಾಂಚಿ ಡಾ.ಉದಯಕುಮಾರ್, ನಿರ್ದೇಶಕರಾದ ಶಿವಪ್ರಸಾದ್, ಕೆ.ಬಿ. ನಾಗರಾಜ್, ಸಿ.ಬಿ. ನಾಗರಾಜ್, ಡಿ.ವಿ. ಹರೀಶ್, ಸುಲೋಚನಾ ಗಿರೀಶ್, ಬಿ.ಕೆ. ಯತೀಶ್ ಉಪಸ್ಥಿತರಿದ್ದರು. ಪ್ರಮುಖ ಮುನೀರ್ ನಿರೂಪಿಸಿದರು. ಬಿ.ವಿ.ಸುಮಾ ಮತ್ತು ತಂಡದವರು ಪ್ರಾರ್ಥಿಸಿದರು.