ಮಡಿಕೇರಿ, ಡಿ. 25: ಕೊಡಗಿನ ಪ್ರಾಕೃತಿಕ ವಿಕೋಪ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗುವಂತೆ ಸಹೃದಯ ಕರುನಾಡಿನ ಜನರಿಗೆ ಟಿವಿ9 ಕರೆಯನ್ನು ನೀಡಿತು. ಕೊಡಗಿನ ಈ ಮೂಕ ರೋದನೆಯನ್ನು ಕಂಡು ಮರುಗಿದ ಕನ್ನಡಿಗರು, ಟಿವಿ9 ಮೂಲಕ ಸಹಾಯ ಹಸ್ತ ಚಾಚಿದರು. ಕನ್ನಡಿಗರು ಬರೋಬ್ಬರಿ 1 ಕೋಟಿ ಹಣವನ್ನು ಟಿವಿ9 ಒಟ್ಟುಗೂಡಿಸುವಂತೆ ಮಾಡಿದ್ದರು. ಆ ಹಣದಲ್ಲೀಗ ಕೊಡಗಿನ ಸಂತ್ರಸ್ತ ಕುಟುಂಬದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುವ ಹೊಣೆಯನ್ನು ಟಿವಿ9 ಹೊತ್ತಿದೆ. ಪ್ರಾಕೃತಿಕ ವಿಕೋಪದಿಂದಾಗಿ ತೊಂದರೆಗೆ ಒಳಗಾದ ಕುಟುಂಬದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆ ಸಂಪೂರ್ಣ ಹಣವನ್ನು ವಿನಿಯೋಗ ಮಾಡಲು ತೀರ್ಮಾನಿಸಿದೆ.

ಮೊದಲ ಹಂತವಾಗಿ ಕೊಡಗಿನ ಪೊನ್ನಂಪೇಟೆಯ ಶ್ರೀ ಸಾಯಿ ಶಂಕರ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂತ್ರಸ್ತ ಕುಟುಂಬದ 62 ಹೆಣ್ಣು ಮಕ್ಕಳನ್ನ ಟಿವಿ9 ದತ್ತು ತೆಗೆದುಕೊಂಡಿದೆ. ಆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಊಟ, ವಸತಿ ಎಲ್ಲವನ್ನೂ ಕೂಡ ಮುಂದಿನ ಮೂರು ವರ್ಷಗಳ ಕಾಲ ನೋಡಿಕೊಳ್ಳಲಿದೆ. ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬದ ಹೆಣ್ಣು ಮಕ್ಕಳು ವಿದ್ಯಾಬ್ಯಾಸಕ್ಕಾಗಿ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದರೆ ಅವರಿಗೂ ಕೂಡ ಮುಂದಿನ ದಿನಗಳಲ್ಲಿ ನೆರವಾಗಲಿದೆ. ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಶುಭಕೋರುವ ನಿಟ್ಟಿನಲ್ಲಿ, ತಾ. 26ರಂದು (ಇಂದು) ಸಂಜೆ 6 ಗಂಟೆಗೆ ಶ್ರೀ ಸಾಯಿ ಶಂಕರ ಶಾಲೆಯ ಆವರಣದಲ್ಲಿ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಟಿವಿ9 ಆಯೋಜಿಸಿದೆ. ಈ ವೇಳೆ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಶುಲ್ಕದ ಚೆಕ್ಕನ್ನು ಹಸ್ತಾಂತರ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಹೆಚ್ಚಿಸೋ ನಿಟ್ಟಿನಲ್ಲಿ ಕೊಡಗಿನ 9 ಮಂದಿ ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತಿದೆ. ಸಿನಿತಾರೆ ರಶ್ಮಿಕಾ ಮಂದಣ್ಣ, ಐಆರ್‍ಎಸ್ ಆಫೀಸರ್ ಪ್ರೀತ್, ಅಂತರ್ರಾಷ್ಟ್ರೀಯ ಹಾಕಿ ಅಂಪೈರ್ ಅನುಪಮಾ, ಸಾಹಿತಿಗಳಾದ ಶೋಭಾ ಸುಬ್ಬಯ್ಯ ಹಾಗೂ ಗೀತಾ ಮಂದಣ್ಣ, ಮೇಜರ್ ಈಶ್ವರಿ, ಉದ್ಯಮಿ ಫ್ಯಾನ್ಸಿ ಗಣಪತಿ, ಜಡ್ಜ್ ಶಿಲ್ಪಾ ಗಣೇಶ್, ಶಿಕ್ಷಕಿ ರೇವತಿ ರಮೇಶ್ ಇವರುಗಳನ್ನು ಗೌರವಿಸಲಾಗುತ್ತಿದೆ. ಜಿಲ್ಲಾಧಿಕಾರಿ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್, ಏರ್ ಮಾರ್ಷಲ್ ನಿವೃತ್ತ ನಂದಾ ಕಾರ್ಯಪ್ಪ, ಯೋಗಗುರು ವಚನಾನಂದ ಸ್ವಾಮೀಜಿ, ಆಸ್ಟ್ರೇಲಿಯಾದಲ್ಲಿ ಕನ್ನಡ ಸಂಘದ ಅಧ್ಯಕ್ಷರಾಗಿರುವ ಚಂದ್ರಶೇಖರ್ ಹಾಗೂ ಟಿವಿ9 ನಿರ್ದೇಶಕ ಮಹೇಂದ್ರ ಮಿಶ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಟಿವಿ9 ಕೊಡಗು ಎಜುಕೇಷನ್ ಫಂಡ್‍ನ ಮೇಲುಸ್ತುವಾರಿ ಸದಸ್ಯರಾದ ಜಿ. ಚಿದ್ವಿಲಾಸ್, ಕೆ.ಕೆ ಮಹೇಶ್ ಕುಮಾರ್ ಹಾಗೂ ಮಂಜು ಚಿಣ್ಣಪ್ಪ ಇವರುಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರ ನಟಿಯರಾದ ರಾಗಿಣಿ ದ್ವಿವೇದಿ , ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಹಾಸ್ಯ ಕಲಾವಿದರಾದ ಪ್ರೊಫೆಸರ್ ಕೃಷ್ಣೇಗೌಡ ಹಾಗೂ ತಬಲ ನಾಣಿ, ಕಾಮಿಡಿ ಶೋ ಖ್ಯಾತಿಯ ನಯನಾರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೆ ನಾಗರಿಕರು ಆಗಮಿಸುವಂತೆ ಟಿವಿ9 ಪತ್ರಿಕಾ ಪ್ರಕಟಣೆ ಮೂಲಕ ಕೋರಿದೆ.