ಸೋಮವಾರಪೇಟೆ, ಡಿ. 25: ಪೋಷಕರು ತಮ್ಮ ಮಕ್ಕಳಿಗೆ ಕೊಡಗಿನ ನೆಲ, ಜಲ, ಸಂಸ್ಕøತಿ, ಭಾಷೆಯನ್ನು ಮಾತ್ರ ಪರಿಚಯಿಸಿದರೆ ಸಾಲದು, ಕೊಡವರ ಪ್ರಮುಖ ಹಬ್ಬ ಹರಿದಿನಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಮಾದಾಪುರ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚೈಯಂಡ ಮಂದಪ್ಪ ಅಭಿಪ್ರಾಯಿಸಿದರು.
ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಸಮಾಜದ ಸಮುದಾಯ ಭವನದಲ್ಲಿ ನಡೆದ ಪುತ್ತರಿ ಊರೊರ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಾಂಗದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಎಫ್‍ಎಸ್ ನಂತಹ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡವ ಸಮಾಜಗಳು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಕೊಡವ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಧಾರಾಕಾರ ಮಳೆ ಸುರಿದು ಗ್ರಾಮೀಣ ಭಾಗದ ರೈತರು ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭ, ನೊಂದವರಿಗಾಗಿ ಕೊಡವ ಸಮಾಜದಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪಿಸಿ, ಸಹಕಾರ ನೀಡಿದ್ದೇವೆ. ಈ ಕಾರ್ಯದಲ್ಲಿ ಎಲ್ಲಾ ಜನಾಂಗದ ಜನರು ಸಹಾಯ ಮಾಡಿದ್ದಾರೆ ಎಂದು ಹೇಳಿದರು. ಸರ್ಕಾರ ಕೂಡ ಮಳೆಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಕಾರ್ಯದರ್ಶಿ ತೇಲಪಂಡ ಕವನ್ ಕಾರ್ಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಬಾಚಿನಾಡಂಡ ರೀಟಾ ಕುಶಾಲಪ್ಪ ಇದ್ದರು. ಇದೇ ಸಂದರ್ಭ ಹಿರಿಯರಾದ ಪೇರಿಯಂಡ ವಿಶಾಲಾಕ್ಷಿ ರಘು ಅವರನ್ನು ಸನ್ಮಾನಿಸಲಾಯಿತು. ನಿಧಿ ತಿಮ್ಮಯ್ಯ ಪ್ರಾರ್ಥಿಸಿ, ಅಕ್ಷಿತಾ ಕಾರ್ಯಪ್ಪ ನಿರೂಪಿಸಿ, ಸತೀಶ್ ಬೆಳ್ಯಪ್ಪ ವಂದಿಸಿದರು.
ಶಿರಂಗಳ್ಳಿಯವರಿಂದ ಬೊಳಕಾಟ್, ಕೋಲಾಟ್, ಪರಿಕಳೆಯಾಟ್. ಮಾದಾಪುರದ ವ್ಯಾಲಿ ಡ್ಯೂ ಇನ್ ತಂಡದವರಿಂದ ಉಮ್ಮತಾಟ್, ಸೋಮವಾರಪೇಟೆ ಕೊಡವ ಸಮಾಜದ ಯುವಕ ಹಾಗೂ ಯುವತಿಯರಿಂದ ನೃತ್ಯ ಕಾರ್ಯಕ್ರಮಗಳು ನಡೆದವು.