ಸೋಮವಾರಪೇಟೆ, ಡಿ. 25: ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನದ ಕನಸು ಇಂದಿಗೂ ನನಸಾಗಿಲ್ಲ. ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಟರ್ಫ್ ಕಾಮಗಾರಿಗೆ ಭೂಮಿಪೂಜೆ ನಡೆದು 5 ವರ್ಷಗಳೇ ಉರುಳಿದರೂ ಸಹ ಮೈದಾನ ಮಾತ್ರ ಮೇಲೆದ್ದಿಲ್ಲ.
ಟರ್ಫ್ ಕಾಮಗಾರಿಗೆ ಭೂಮಿ ಪೂಜೆ ನಡೆದ ದಿನದಂದೇ ಪರ ವಿರೋಧಗಳು ವ್ಯಕ್ತವಾಗಿತ್ತು. ಇಲ್ಲಿ ಟರ್ಫ್ ನಿರ್ಮಿಸಿದರೆ ಇತರ ಕ್ರೀಡೆಗೆ ಮೈದಾನದ ಕೊರತೆ ಎದುರಾಗುತ್ತದೆ. ಅಷ್ಟಕ್ಕೂ ಈ ಮೈದಾನ ಟರ್ಫ್ಗೆ ಬೇಕಾದಷ್ಟು ವಿಸ್ತೀರ್ಣ ಹೊಂದಿಲ್ಲ ಎಂದು ಕೆಲವರು ವಾದಿಸಿದರು. ನಂತರ ಇಲಾಖೆಯಿಂದಲೇ ಸರ್ವೆ ಮಾಡಿದಾಗ ಸಾಕಷ್ಟು ವಿಸ್ತೀರ್ಣ ಇರುವದು ದೃಢಪಟ್ಟಿತು. ಇದರೊಂದಿಗೆ ಬೇರೆ ಕ್ರೀಡೆಗಳಿಗೆಂದು ಬಿಇಓ ಕಚೇರಿ ಮುಂಭಾಗ ಹೊಸ ಮೈದಾನವನ್ನೂ ನಿರ್ಮಿಸಲಾಯಿತು. ಆದರೂ ಸಹ ಈವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಗೊಂಡಿಲ್ಲ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. 3.40 ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿ ಮಾರ್ಚ್ 14 ಕ್ಕೆ ಬರೋಬ್ಬರಿ ಐದು ವರ್ಷ ಪೂರ್ಣಗೊಂಡಿದ್ದು, ಆರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ.
ಈ ಹಿಂದೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖಾ ಸಚಿವರಾಗಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ವಿಶೇಷ ಆಸಕ್ತಿಯಡಿ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಸೋಮವಾರ ಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆಂದು ರೂ. 3.40 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಕಳೆದ ತಾ. 14.03.2013 ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಶಿವಪ್ಪ ಅವರು ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಅದರಂತೆ ಭೂಮಿಪೂಜೆಯೂ ನೆರವೇರಿತು. ಈ 5 ವರ್ಷದಲ್ಲಿ ಮೈದಾನದ ಒಂದು ಬದಿಯಲ್ಲಿ ರೂ. 80 ಲಕ್ಷ ವೆಚ್ಚದಲ್ಲಿ ತಡೆಗೋಡೆ, ಮೈದಾನದ ಒಳಗೆ ಸಣ್ಣ ಚರಂಡಿ ನಿರ್ಮಾಣ ವಾಗಿದ್ದು ಬಿಟ್ಟರೆ ಉಳಿದಂತೆ ಯಾವದೇ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ವಿಚಾರಿಸಿದರೆ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಿಲ್ಲ ಎಂಬ ಮಾತು ಕೇಳಿಬರುತ್ತಿದೆ ಎಂದು ಕ್ರೀಡಾಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಪ್ರಶ್ನೆಗೆ ಡಿಸಿಎಂ ಉತ್ತರ: ಬೆಳಗಾವಿಯ ಅಧಿವೇಶನದಲ್ಲಿ ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸರ್ಕಾರ ಗಮನ ಸೆಳೆದಿದ್ದು, ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದ ಪ್ರಗತಿ ಬಗ್ಗೆ ಪ್ರಶ್ನಿಸಿದ್ದಾರೆ. ಸೋಮವಾರಪೇಟೆಯಲ್ಲಿ ಟರ್ಫ್ ಮೈದಾನ ನಿರ್ಮಿಸಲು ಈಗಾಗಲೇ ತಡೆಗೋಡೆ ನಿರ್ಮಿಸಿದ್ದು, ಟರ್ಫ್ ಕಾಮಗಾರಿಯನ್ನು ಈವರೆಗೂ ಕೈಗೊಳ್ಳದೇ ಇರಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, ಲಿಖಿತ ಉತ್ತರ ನೀಡಿದ್ದು, ಸೋಮವಾರಪೇಟೆ ಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ಇರುವ ವಿಸ್ತೀರ್ಣಕ್ಕೆ ಅಗತ್ಯವಿರುವ ಹೆಚ್ಚುವರಿ ವಿಸ್ತೀರ್ಣದ ಜಾಗವನ್ನು ಸೇರ್ಪಡಿಸಿ ಸಿದ್ಧಪಡಿಸಲು ಕಾಲಾವಕಾಶ ತಗುಲಿ ದ್ದರಿಂದ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಯಶಸ್ವಿ ಬಿಡ್ದಾರರಿಗೆ ದರ ಒಪ್ಪಿಗೆ ಪತ್ರ ನೀಡಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ತಿಳಿಸಿದ್ದಾರೆ.
ವಾರದಲ್ಲಿ ಕಾಮಗಾರಿ-ಅಭಿಯಂತರ: ಸೋಮವಾರಪೇಟೆ ಯಲ್ಲಿ ಟರ್ಫ್ ಅಳವಡಿಕೆ ಕಾಮಗಾರಿಯನ್ನು ಮುಂದಿನ ಒಂದು ವಾರದೊಳಗೆ ಪ್ರಾರಂಭಿಸ ಲಾಗುವದು. ಕ್ರಿಯಾಯೋಜನೆಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದ್ದು, ಇದೀಗ ಎಲ್ಲವೂ ಸಮರ್ಪಕವಾಗಿದೆ. ತಕ್ಷಣ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗುವದು ಎಂದು ಡಿವೈಇಎಸ್ ಅಭಿಯಂತರ ಕಾಂತರಾಜ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಸರ್ಕಾರ ಮತ್ತು ಅಧಿಕಾರಿಗಳ ಇಚ್ಚಾಶಕ್ತಿಯಿಂದ ಎಲ್ಲವೂ ಸುಸೂತ್ರವಾದರೆ, ಅತ್ಯುತ್ತಮ ಕ್ರೀಡಾಪಟುಗಳನ್ನು ನೀಡಿದ ಸೋಮವಾರಪೇಟೆ ಮೈದಾನ ಮುಂದಿನ ಕೆಲ ತಿಂಗಳುಗಳಲ್ಲಿಯೇ ಸಿಂಥೆಟಿಕ್ ಟರ್ಫ್ ಮೈದಾನವಾಗಿ ಕಂಗೊಳಿಸಲಿದೆ. ಆ ಮೂಲಕ ಈ ಭಾಗದ ಅಸಂಖ್ಯಾತ ಕ್ರೀಡಾ ಪ್ರೇಮಿಗಳ ಕನಸು ಸಾಕಾರಗೊಳ್ಳಲಿದೆ.
- ವಿಜಯ್ ಹಾನಗಲ್