ಸುಂಟಿಕೊಪ್ಪ,ಡಿ.25: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ದುರ್ಗಾ ಲಕ್ಷ್ಮಿ ದೇವಾಲಯ ಶ್ರೀ ನಾಗನ ಪ್ರತಿಷ್ಠಾಪನೆ ಮತ್ತು ತೀರ್ಥ ಮಂಟಪದ ಕಾಮಗಾರಿಯು ಭರದಿಂದ ಸಾಗುತ್ತಿದೆ.
1990 ರಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರವನ್ನು ನಿರ್ಮಿಸಲು ಶಾಂತಿಗಿರಿ ತೋಟದ ಮಾಲೀಕರು ನಿವೇಶನವನ್ನು ಉದಾರವಾಗಿ ನೀಡಿದ್ದರು. 1992 ರ ಮೇ 2 ರಂದು ಆಗಿನ ದೇವಾಲಯ ಅಧ್ಯಕ್ಷ ಹೆಚ್. ಗಂಗಾಧರ ಅವರ ಮುಂದಾಳತ್ವದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು 1992 ಮೇ 8 ರಂದು ಪ್ರತಿಷ್ಠಾಪಿಸಲಾಗಿದೆ. 2009 ರಿಂದ 2014 ರವರೆಗೆ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನೈವೇದ್ಯಕೊಠಡಿ, ಕಚೇರಿ, ದಾಸ್ತಾನು ಕೊಠಡಿ ಹಾಗೂ ಶ್ರೀ ಕನ್ನಿ ಮೂಲ ಗಣಪತಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.
2017-18 ನೇ ಸಾಲಿನಲ್ಲಿ ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ವಿ.ವಿಶ್ವನಾಥ ಭಟ್ರವರಿಂದ ಅಷ್ಟಮಂಗಲಪ್ರಶ್ನೆವಿಟ್ಟಾಗ ಶಿಲ್ಪಶಾಸ್ತ್ರ ಪ್ರಕಾರ ಮುಂದಿನ ದಿನಗಳಲ್ಲಿ ಶ್ರೀದುರ್ಗಾದೇವಿ ದೇವಾಲಯ, ಶ್ರೀನಾಗನ ಪ್ರತಿಷ್ಠಾಪನೆ ಮತ್ತು ತೀರ್ಥ ಮಂಟಪವನ್ನು ಶಾಸ್ತ್ರೋಕ್ತವಾಗಿ ನಿರ್ಮಿಸಬೇಕೆಂದು ತಿಳಿದು ಬಂದಿರುತ್ತದೆ. ಅದರಂತೆ ಈ ಕಾಮಗಾರಿಗೆ ಆಡಳಿತ ಮಂಡಳಿ ಕಾರ್ಯೋನ್ಮುಖರಾಗಿದ್ದು ದಾನಿಗಳ ತನು ಮನ ಧನ ಸಹಾಯ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಆಡಳಿತ ಮಂಡಳಿ ಅಧ್ಯಕ್ಷ ಧನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶಗೋಪಿ ತಿಳಿಸಿದ್ದಾರೆ.
ಮಂಡಲಪೂಜೆ: ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ತಾ.27 ರಂದು ನಡೆಯಲಿದೆ. ತಾ.27 ರಂದು ಪೂರ್ವಾಹ್ನ 6.45 ಗಂಟೆಗೆ ಗಣಪತಿ ಹೋಮ, ಪೂರ್ವಾಹ್ನ 7.30 ಚಂಡೆಮೇಳ, 9.ಗಂ.ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ 12 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಮಧ್ಯಾಹ್ನದ ಪೂಜೆ, 12.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ ಪಲ್ಲಪೂಜೆ 12.45 ಗಂಟೆಗೆ ಸಿಡಿಮದ್ದು ಪ್ರದರ್ಶನ 1 ಗಂಟೆಯಿಂದ 4 ಗಂಟೆಯವರೆಗೆ ಅನ್ನ ಸಂತರ್ಪಣೆ, ವಿಶೇಷಪೂಜೆ ಬಿಲ್ವಪತ್ರೆ ಅರ್ಚನೆ,ತುಳಸಿ ಅರ್ಚನೆ ಪಂಚಾಮೃತ ಅಭಿಷೇಕ ಹಾಗೂ ದುರ್ವಾಚನೆ ನಡೆಯಲಿದೆ.
ಸಂಜೆ 6. ಗಂಟೆಗೆ ವಿದ್ಯುತ್ ದೀಪಾಲಂಕೃತವಾದ ಭವ್ಯ ಮಂಟಪ ದಲ್ಲಿ ನೀಲಾಂಜನ (ಮಕ್ಕಳಿಂದ ದೀಪ ಹಿಡಿಯುವಿಕೆ) ಹಾಗೂ ಚಂಡೆ ಮೇಳದೊಂದಿಗೆ ವಿಜೃಂಭಣೆಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ನಗರದ ಮುಖ್ಯ ಬೀದಿಗಳಲ್ಲಿ ಕೊಂಡೊಯ್ಯಲಾಗುವದು ರಾತ್ರಿ 10 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದು ಅಧ್ಯಕ್ಷ ಧನು ಕಾವೇರಪ್ಪ ತಿಳಿಸಿದ್ದಾರೆ.