ಮಡಿಕೇರಿ, ಡಿ. 25: ಪ್ರತಿಯೋರ್ವರು ತಮ್ಮ ಮಕ್ಕಳನ್ನು ದೇಶಸೇವೆಗೆ ಕಳುಹಿಸುವಂತೆ ಕೊಡಗು ಗೌಡ ಮಾಜಿ ಯೋಧರ ಒಕ್ಕೂಟದ ಅಧ್ಯಕ್ಷ ತುಂತಜೆ ದಯಾನಂದ ಕರೆ ನೀಡಿದರು.

ಒಕ್ಕೂಟದ 8ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೋರ್ವ ರಿಗೂ, ಅದರಲ್ಲೂ ಗೌಡ ಜನಾಂಗ ಬಾಂಧವರು ತಮ್ಮ ಮಕ್ಕಳನ್ನು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ದೇಶಸೇವೆಗೆ ಕಳುಹಿಸಿ ನಮ್ಮ ನಾಡಿಗೆ, ಜನಾಂಗಕ್ಕೆ ಕೀರ್ತಿ ತರುವಂತಾಗಬೇಕೆಂದು ಹೇಳಿದರು. ಅತಿಥಿಗಳಾಗಿದ್ದ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅವರು, ಸಂಘದ ವತಿಯಿಂದ ಕೃಷಿ ತರಬೇತಿ, ಆರೋಗ್ಯ ತಪಾಸಣೆ, ವಧೂವರರ ವೇದಿಕೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ಜನಾಂಗದ ಸಾಧಕರನ್ನು ಗುರುತಿಸುವ ಕಾರ್ಯ ಆಗಬೇಕೆಂದು ಹೇಳಿದರು.

ಚೌಡೇಶ್ವರಿ ಗೌಡ ಕೂಟದ ಅಧ್ಯಕ್ಷ ಕುದುಪಜೆ ಆನಂದ ಅವರು ಮಾತನಾಡಿ, ಯೋಧರು ನಿವೃತ್ತಿಯ ನಂತರವೂ ಸಾರ್ವಜನಿಕ ಸೇವೆ ಮಾಡಬೇಕು. ವಿದ್ಯಾವಂತರಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು. ಹಿರಿಯ ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ ಅವರು, ಆಕಾಶವಾಣಿಯಲ್ಲಿ ಅರೆಭಾಷೆ ಕಾರ್ಯಕ್ರಮ ಬಿತ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಸಲಹೆ ಮಾಡಿದರು. ಅರೆಭಾಷೆಯನ್ನು ಉಳಿಸಿ ಬೆಳೆಸಬೇಕೆಂದರು.

ಇದೇ ಸಂದರ್ಭದಲ್ಲಿ ಪಾಕ್ ಗುಂಡಿಗೆ ಎದೆಯೊಡ್ಡಿ ರಾಷ್ಟ್ರಪತಿಗಳ ಪ್ರಶಸ್ತಿ ಪಡೆದ ನಿವೃತ್ತ ಯೋಧ ಗೋವಿಂದಮ್ಮನ ಮುತ್ತಪ್ಪ ಹಾಗೂ ನಿವೃತ್ತ ಯೋಧ, ಜಿಲ್ಲಾ ಪಂಚಾಯತ್ ಡಿಯುಡಿಸಿ ಅಭಿಯಂತರರಾಗಿರುವ ನೈಯ್ಯಣಿ ಹೇಮಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುತ್ತಪ್ಪ ಅವರು, ಮುಂದಿನ ಪೀಳಿಗೆಯನ್ನು ದೇಶ ಸೇವೆಗೆ ಕಳುಹಿಸಿ, ಅವರಲ್ಲಿ ದೇಶ ಭಕ್ತಿ ತುಂಬುವಂತೆ ಮಾಡಬೇಕೆಂದರು. ಹೇಮಕುಮಾರ್ ಅವರು, ಆರೋಗ್ಯವೇ ಮುಖ್ಯ, ಆರೋಗ್ಯವಿದ್ದರೆ ಹಣ ಸಂಪಾದಿಸ ಬಹುದು. ಆದರೆ ಹಣದಿಂದ ಆರೋಗ್ಯ ಕೊಂಡು ಕೊಳ್ಳಲು ಸಾಧ್ಯವಿಲ್ಲ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಂತೆ ಹೇಳಿದರು. ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕೆಂದರು. ಇದೇ ಸಂದರ್ಭ ಅಗಲಿದ ಯೋಧರಿಗೆ, ಪ್ರಕೃತ್ತಿ ವಿಕೋಪದಿಂದ ಜೀವಕಳೆದು ಕೊಂಡವರಿಗೆ ಸಂತಾಪ ಸೂಚಿಸಲಾಯಿತು.

ಚೆರಿಯಮನೆ ರಮಿತ ಹಾಗೂ ಮೂಟೇರ ಸಿಮ್ರಾನ್ ಪ್ರಾರ್ಥಿಸಿದರು. ಪಾರೆಮಜಲು ಬಸಪ್ಪ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ತಳೂರು ಕಾಳಪ್ಪ ವರದಿ ವಾಚಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಪರ್ಲಕೋಟಿ ವಿಶ್ವನಾಥ್ ಲೆಕ್ಕ ಪತ್ರ ಮಂಡಿಸಿದರು. ಕಾಕೇರಿ ರಾಮಚಂದ್ರ ಮಾಸ್ಟರ್ ಹಾಗೂ ಚೆರಿಯಮನೆ ಪೆಮ್ಮಯ್ಯ ಅವರುಗಳು ಕಾರ್ಯಕ್ರಮ ನಿರೂಪಿಸಿದರೆ, ಮಾಜಿ ಅಧ್ಯಕ್ಷ ಮೊಳ್ಳೇರ ಅಚ್ಚಯ್ಯ ವಂದಿಸಿದರು.