ಮಡಿಕೇರಿ, ಡಿ. 24: ನಗರದಲ್ಲಿ ಕೊಡಗಿನ ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಲಯ ಕಟ್ಟಡ ‘ಸನ್ನಿಸೈಡ್’ ಭವನವನ್ನು ಕಾಮಗಾರಿ ಸೇರಿದಂತೆ ನಿರ್ವಹಣೆಗಾಗಿ, ಈಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯಿಂದ ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ರಾಜ್ಯ ಸಚಿವೆ ಜಯಮಾಲ ಸ್ಪಷ್ಟಪಡಿಸಿದ್ದಾರೆ.ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸ್ಮಾರಕ ಕಾಮಗಾರಿ ಬಗ್ಗೆ ಪ್ರಭಾರ ಅಧಿಕಾರಿ ದರ್ಶನ್ ಪ್ರಸ್ತಾಪಿಸಿದಾಗ, ವೀರಸೇನಾನಿ ಹೆಸರಿನ ವಸ್ತು ಸಂಗ್ರಹಾಲಯ ಉಸ್ತುವಾರಿಯನ್ನು ಪ್ರವಾಸೋದ್ಯಮ ಇಲಾಖೆ ಅಧೀನಕ್ಕೆ ನೀಡಲಾಗಿದೆ ಎಂದು ಸಚಿವರು ಸಮಜಾಯಿಷಿಕೆ ನೀಡಿದರು. ಅಲ್ಲದೆ ಭವಿಷ್ಯದಲ್ಲಿ ಈ ಮ್ಯೂಸಿಯಂ ವೀಕ್ಷಣೆಗೆ ಪ್ರವಾಸಿಗರು ಬರುವದ ರಿಂದ ಆ ಇಲಾಖೆ ವ್ಯಾಪ್ತಿಗೆ ಸರಕಾರ ವಹಿಸಿದೆಯೆಂದು ವಿವರಿಸಿದರು.ಅಂದಾಜು ರೂ. 5.50 ಕೋಟಿ ಯೋಜನೆಯ ಈ ವಸ್ತು ಸಂಗ್ರ ಹಾಲಯ ಕಾಮಗಾರಿಗೆ ಇದುವರೆಗೆ ರೂ. 2.75 ಕೋಟಿ ಬಿಡುಗಡೆ ಯಾಗಿದ್ದು, ಇನ್ನು ಶೇ.50ರಷ್ಟು ಹಣವನ್ನು ಸರಕಾರ ದಿಂದ ಕಲ್ಪಿಸಬೇಕೆಂದು ಪ್ರಸ್ತಾಪಿಸ ಲಾಯಿತು. ಆಗ ಪ್ರತಿಕ್ರಿಯಿಸಿದ ಜಯಮಾಲ ಪ್ರವಾಸೋದ್ಯಮ ಇಲಾಖೆಯಲ್ಲಿ ಸಾಕಷ್ಟು ಅನುದಾನ ವಿದ್ದು, ಸಂಬಂಧಪಟ್ಟವರ ಗಮನ ಸೆಳೆಯುವದಾಗಿ ಭರವಸೆ ನೀಡಿದರು.

ಕಲಾವಿದರಿಗೆ ಪ್ರೋತ್ಸಾಹ : ಕೊಡಗಿನಲ್ಲಿರುವ ಕಲಾ ತಂಡಗಳು, ಕಲಾವಿದರುಗಳನ್ನು ಗುರುತಿಸಿ, ಅವರ ಸಾಧನೆಯನ್ನು ಪ್ರೋತ್ಸಾಹಿಸಬೇಕೆಂದು ನಿರ್ದೇಶಿಸಿದ ಸಚಿವರು, ಹಿರಿಯರಿಗೆ ಮಾಸಾಶನ ಕಲ್ಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಕಲಾಭವನ : ಕುಶಾಲನಗರದಲ್ಲಿ ರೂ.3.99 ಕೋಟಿ ಮೊತ್ತದ ಕಲಾಭವನ ಕಾಮಗಾರಿ ಹಾಗೂ ಮಡಿಕೇರಿಯ ಸುವರ್ಣ ಸಂಸ್ಕøತಿ ಸೌಧದ ರೂ.3.70 ಕೋಟಿ ಯೋಜನೆಯ ಕಾಮಗಾರಿ ಅಪೂರ್ಣ ಗೊಂಡಿದ್ದು, ಈ ಎಲ್ಲಾ ಕೆಲಸಗಳಿಗೆ ಲೋಕೋಪಯೋಗಿ ಇಲಾಖೆ ಅಧಿಕ ಅನುದಾನವನ್ನು ಹೆಚ್ಚುವರಿ ಬೇಡಿಕೆ ಸಲ್ಲಿಸಿದೆ ಎಂಬ ಅಂಶದ ಕುರಿತು ಚರ್ಚೆ ನಡೆಯಿತು. ಕೊಡಗಿನಲ್ಲಿ ತಮ್ಮ ಇಲಾಖೆಗಳಿಂದ

(ಮೊದಲ ಪುಟದಿಂದ) ರೂಪುಗೊಳ್ಳುವ ಕೇಂದ್ರ ಮತ್ತು ರಾಜ್ಯ ಸರಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಸಚಿವೆ ಜಯಮಾಲ ಆಯಾ ಇಲಾಖೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಕೂಡ ನಿಗಾವಿಡುವಂತೆ ಸಲಹೆಯಿತ್ತರು.

ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್ ಜಾರಿ

ರಾಜ್ಯದಲ್ಲಿ ಹೆಚ್ಚು ಮಳೆಯಾಗುವ ಮಲೆನಾಡು ತಾಲೂಕುಗಳ ಅಂಗನವಾಡಿಯ ಮಕ್ಕಳಿಗೆ ಸ್ವೆಟರ್, ಶೂ, ಸಾಕ್ಸ್, ಕೊಡೆ ಇತರೆ ಅಗತ್ಯ ವಸ್ತುಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ ಎಂದು ಜಯಮಾಲ ತಿಳಿಸಿದರು. ಮಲೆನಾಡು ಪ್ರದೇಶದ ಅಂಗನವಾಡಿ ಮಕ್ಕಳು ಮಳೆಗಾಲದ ಅವಧಿಯಲ್ಲಿ ಚಳಿ, ಮಳೆಗೆ ಸಿಲುಕಿ ತುಂಬಾ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಚಿಂತಿಸಲಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸಚಿವರು ಸಲಹೆ ಮಾಡಿದರು.

ರಾಜ್ಯದಲ್ಲಿ ಏಕರೂಪ ಮಾದರಿಯಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಯಮಾಲಾ ನಿರ್ದೇಶನ ನೀಡಿದರು.

ಮಕ್ಕಳಿಗೆ ಕೆನೆಸಹಿತ ಹಾಲು, ಮೊಟ್ಟೆ ವಿತರಿಸಬೇಕು. ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಪೌಷ್ಟಿಕ ಆಹಾರ ನೀಡಬೇಕು. ಯಾವದೇ ಕಾರಣಕ್ಕೂ ಪೌಷ್ಟಿಕ ಆಹಾರ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಾತೃಪೂರ್ಣ ಯೋಜನೆಯನ್ನು ತಾಯಂದಿರು, ಗರ್ಭಿಣಿಯರು, ಬಾಣಂತಿಯರಿಗೆ ಸಮರ್ಪಕವಾಗಿ ತಲಪಿಸಬೇಕು. ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಂಗನವಾಡಿ ಶಿಕ್ಷಕಿಯರನ್ನು ಇತರೆ ಕಾರ್ಯಗಳಿಗೆ ನಿಯೋಜಿಸಬಾರದು. ನಿವೃತ್ತರಾದವರನ್ನು ಬಳಸಿಕೊಳ್ಳುವಂತೆ ಸಚಿವರು ಸಲಹೆ ಮಾಡಿದರು.

ಗಡಿ ಪ್ರದೇಶದ ಅಂಗನವಾಡಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ. ಆಸ್ಪತ್ರೆ, ಕುಡಿಯುವ ನೀರು, ಸಾರಿಗೆ ಸಂಪರ್ಕ, ವಿದ್ಯುತ್, ಜನಜೀವನ ಪದ್ಧತಿ, ಕನ್ನಡ ಭವನ ಮತ್ತಿತರ ಬಗ್ಗೆ ಗಡಿನಾಡ ಪ್ರದೇಶದಲ್ಲಿ ಸಮೀಕ್ಷೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸಚಿವರಾದ ಜಯಮಾಲ ಅವರು ಸಲಹೆ ಮಾಡಿದರು.

ಜಿಲ್ಲೆಯ ಗಡಿಯ ಕರಿಕೆ ಭಾಗದ 13 ಅಂಗನವಾಡಿಗಳು, ವೀರಾಜಪೇಟೆ ತಾಲೂಕಿನ ಮಾಕುಟ್ಟ ಮತ್ತು ಕುಟ್ಟದಲ್ಲಿ ತಲಾ ಒಂದು ಅಂಗನವಾಡಿಗಳಿವೆ ಎಂದು ಸಿಡಿಪಿಒ ಅವರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಅಂಗನವಾಡಿಗಳಿಗೂ ಬಯೋಮೆಟ್ರಿಕ್ ಪದ್ಧತಿ ಅಳವಡಿಸಲಾಗುವದು ಎಂದು ಅವರು ತಿಳಿಸಿದರು. ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ, ಮಕ್ಕಳ ಹಾಜರಾತಿ ಮತ್ತಿತರ ಬಗ್ಗೆ ನಿಖರ ಮಾಹಿತಿ ದೊರೆಯಬೇಕಿದೆ. ಆ ನಿಟ್ಟಿನಲ್ಲಿ ಬಯೋಮೆಟ್ರಿಕ್ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದರು. ವಿಶೇಷಚೇತನರಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಚಿವರು ವಿಶೇಷಚೇತನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳಬೇಕು. ವಸತಿ, ಶಿಕ್ಷಣ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ವಿಶೇಷಚೇತನರ ಅಧಿಕಾರಿ ಜಿಲ್ಲೆಯಲ್ಲಿ 9,020 ಮಂದಿ ವಿಶೇಷಚೇತನರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ 69 ಮಂದಿ ವಿಶೇಷಚೇತನ ಕುಟುಂಬದವರು ಮನೆ ಕಳೆದುಕೊಂಡಿದ್ದು, ಇವರಿಗೆ ತಕ್ಷಣವೇ ಮಾನವೀಯ ನೆಲೆಯಲ್ಲಿ ವಸತಿ ಕಲ್ಪಿಸಬೇಕು. ಈ ಸಂಬಂಧ ಅವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ನ್ಯೂನತೆಯ ಪ್ರಮಾಣ, ಉದ್ಯೋಗದ ಮಾಹಿತಿಯನ್ನು ಮೂರು ದಿನದೊಳಗೆ ಕಳುಹಿಸಿಕೊಡುವಂತೆ ಅವರು ಸೂಚಿಸಿದರು.

ವಿಶೇಷಚೇತನರು ಮತ್ತು ದಮನಿತರಿಗೆ ಸರ್ಕಾರದ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪ್ರಥಮ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.

ವಿಕಲಚೇತನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 30 ಜಿಲ್ಲೆಗಳಲ್ಲಿ ಘಟಕ ನಿರ್ಮಾಣ ಮಾಡಲಾಗುವದು ಎಂದು ಅವರು ಹೇಳಿದರು. ಸ್ತ್ರೀಶಕ್ತಿ ಭವನಗಳ ನಿಮಾಣ, ಸ್ತ್ರೀಶಕ್ತಿ ಸಂಘಟನೆಗಳನ್ನು ಬಲಪಡಿಸುವದು ಮತ್ತಿತರ ಬಗ್ಗೆ ಹಲವು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ವಿಶೇಷಚೇತನರು ಹಾಗೂ ಮಹಿಳೆಯರು ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲಾಗುವದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಧ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ದರ್ಶನ್, ಸಿಡಿಪಿಒಗಳು ಅವರು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.