ಮಡಿಕೇರಿ, ಡಿ. 24: ಕೊಡಗು ಸೇರಿದಂತೆ ರಾಜ್ಯದ ಅಂಗನವಾಡಿ ಮಕ್ಕಳಿಗೆ ಹಾಗೂ ಕಿಶೋರಿಯರು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಕೆ ಸಮರ್ಪಕವಾಗಿಲ್ಲವೆಂದು, ರಾಜ್ಯ ಮಹಿಳಾ ಮತ್ತು ಮಕ್ಕಳ ಖಾತೆ ಹಾಗೂ ಕನ್ನಡ ಸಂಸ್ಕøತಿ ಸಚಿವೆ ಜಯಮಾಲ ವಿಷಾಧಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಕರ್ನಾಟಕಕ್ಕೆ ಹೋಲಿಸಿದರೆ ನೆರೆಯ ಕೇರಳ, ಆಂದ್ರ, ಮಹರಾಷ್ಟ್ರಗಳಲ್ಲಿ ಹೆಚ್ಚಿನ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಸುವಂತಾಗಿದೆ ಎಂದು ಬೊಟ್ಟು ಮಾಡಿದರು.ಶಿಶುಗಳಿಗೆ ನೀಡುವ ಪೌಷ್ಟಿಕ ಆಹಾರ, ಪೋಷಕಾಂಶಗಳಿಂದ ಕೂಡಿದ ಇತರ ಸವಲತ್ತುಗಳು ದುರುಪಯೋಗದ ಆರೋಪವೂ ಇದ್ದು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಗರ್ಭಿಣಿಯರು, ಬಾಣಂತಿಯರು, ಶಿಶುಗಳು, ಮಕ್ಕಳು ಹಾಗೂ ವಿಶೇಷವಾಗಿ ಕಿಶೋರಿಯರೊಂದಿಗೆ ಹಿರಿಯ ನಾಗರಿಕರು, ವೃದ್ಧರ ಆರೋಗ್ಯ ರಕ್ಷಣೆಗೆ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ನೆನಪಿಸಿದರು.ಇಂತಹ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಯ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು (ಮೊದಲ ಪುಟದಿಂದ) ಕಾಳಜಿ ವಹಿಸುವಂತೆ ಸೂಚಿಸಿದ ಸಚಿವರು, ವಿಶೇಷ ಚೇತನರು ಸೇರಿದಂತೆ ಸ್ತ್ರೀಶಕ್ತಿ ಸಂಘಗಳು ಮಹಿಳಾ ಸಬಲೀಕರಣ ದೊಂದಿಗೆ ಆರ್ಥಿಕ ಸ್ವಾವಲಂಬನೆಗೆ ಗಮನ ಹರಿಸಬೇಕೆಂದು ತಿಳಿ ಹೇಳಿದರು.
ಅಂಗವೈಕಲ್ಯ ಮಾನದಂಡ
ಈ ಹಿಂದೆ ಯಾವದಾದರೂ ಒಂದು ಅಂಗ ನ್ಯೂನ್ಯತೆ ಪರಿಗಣಿಸಿ, ವಿಶೇಷ ಚೇತನರನ್ನು ಪರಿಗಣಿಸುತ್ತಿದ್ದರೆ, ಇಂದು ಕೇಂದ್ರ ಸರಕಾರದ ನಿರ್ದೇಶನದಂತೆ ಪ್ರತಿಯೊಬ್ಬರಿಗೆ 22 ರಿಂದ 32 ರೀತಿಯ ಯಾವದಾದರೊಂದು ನ್ಯೂನ್ಯತೆಯಿದ್ದರೂ, ಅಂತಹವರ ಬದುಕು ಸುಧಾರಣೆಗೆ ಯೋಜನೆಗಳು ರೂಪುಗೊಂಡಿದೆ ಎಂದು ನೆನಪಿಸಿದರು. ಆ ಎಲ್ಲ ದಿಸೆಯಲ್ಲಿ ಕೊಡಗಿನ ಜನತೆಗೆ ಸಂಬಂಧಪಟ್ಟ ಇಲಾಖೆಗಳು ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾಶೀಲರಾಗುವಂತೆ ನಿರ್ದೇಶಿಸಿದರು.
ಅಂಗನವಾಡಿ ಮೇಲ್ದರ್ಜೆಗೆ
ಮಕ್ಕಳನ್ನು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಲು ಅಂಗನವಾಡಿಗಳಿಗೆ ತಲಾ ರೂ. 2 ಲಕ್ಷದಲ್ಲಿ ದುರಸ್ತಿಯೊಂದಿಗೆ ಮೇಲ್ದರ್ಜೆಗೇರಿಸಲು ಕ್ರಮಕೈಗೊಂಡಿದ್ದು, ಈ ಹಿಂದಿನ ವ್ಯವಸ್ಥೆಯ ಒಂದು ಕೋಣೆಯ ಬದಲು 2 ಕೋಣೆ, 2 ಶೌಚಾಲಯ, ಉತ್ತಮ ವಾತಾವರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಸಚಿವೆ ಜಯಮಾಲ ವಿವರಿಸಿದರು. ಇಂತಹ ಪ್ರಗತಿಯಲ್ಲಿ ದುರುಪಯೋಗ ತಡೆಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕೆಂದು ಸಲಹೆಯಿತ್ತರು.
ಪ್ರಯೋಜನವೇನು?
ವಿಶೇಷ ಚೇತನರ ಬದುಕಿಗೆ ವಿಶೇಷ ಗಮನ ಹರಿಸಿ ವಸತಿ, ಉದ್ಯೋಗ, ಶಿಕ್ಷಣ, ಪೌಷ್ಟಿಕ ಆಹಾರದೊಂದಿಗೆ ಆರೋಗ್ಯ ಕಲ್ಪಿಸಲು ಸದೃಢರಾಗಿರುವ ಅಧಿಕಾರಿಗಳಿಗೆ ಸಾಧ್ಯವಾಗದಿದ್ದರೆ ಅಂತಹವರು ಇದ್ದು ಪ್ರಯೋಜನವೇನು? ಎಂದು ಪರೋಕ್ಷವಾಗಿ ಅಧಿಕಾರಿಗಳನ್ನು ಎಚ್ಚರಿಸಿದರು.
ವೃದ್ಧಾಶ್ರಮಕ್ಕೆ ಒತ್ತು: ಹಿರಿಯರಿಗಾಗಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ವೃದ್ಧಾಶ್ರಮದೊಂದಿಗೆ, ನೊಂದವರ, ಮಾನಸಿಕ ಅಸ್ವಸ್ಥರು, ಅನಾಥರಿಗೆ ಆಸರೆ ಕಲ್ಪಿಸಲು ಜಿಲ್ಲಾಡಳಿತ ಹಾಗೂ ಆಯಾ ಇಲಾಖೆಗಳು ಜಂಟಿ ಕಾಳಜಿ ವಹಿಸಬೇಕೆಂದು ಜಯಮಾಲ ಅಭಿಪ್ರಾಯಪಟ್ಟರು.
ಉದ್ಯೋಗ ಕಲ್ಪಿಸಿ: ವಿಶೇಷ ಚೇತನರಿಗೆ ಶ್ರೀಮಂತ ಜಿಲ್ಲೆ ಕೊಡಗಿನಲ್ಲಿಯೇ ಉದ್ಯೋಗ ಕಲ್ಪಿಸುವಂತೆ ನಿರ್ದೇಶಿಸಿದ ಸಚಿವರು, ಇಲಾಖಾವಾರು ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಲೋಪ ಉಂಟಾದರೆ ಸಹಿಸಲಾಗದು ಎಂದರು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಸೇರಿದಂತೆ ಸ್ತ್ರೀಶಕ್ತಿ ಪ್ರತಿನಿಧಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಶಿಶು ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಅನುಪಾಲನಾ ವರದಿ ನೀಡಿದರು.