ವೀರಾಜಪೇಟೆ, ಡಿ. 24: ಗಣಿಗಾರಿಕೆಗೆಂದು ಮೀಸಲಿಟ್ಟ ಪ್ರದೇಶ ಬಿಟ್ಟು, ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಪ್ರಕರಣ ವೊಂದು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಮಾಕುಟ್ಟ ಬಳಿಯ ಕೇರಳ ರಾಜ್ಯಕ್ಕೆ ಒಳಪಡುವ ಕೋಳಿತಟ್ಟು ಎಂಬಲ್ಲಿ ಬೆಳಕಿಗೆ ಬಂದಿದೆ.

ಈಗಾಗಲೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ತನಿಖಾ ಸಂಸ್ಥೆಗಳು ಬೆನ್ನತ್ತಿವೆ. ಮತ್ತೊಂದೆಡೆ ನೈಸರ್ಗಿಕ ಸಂಪತ್ತು ರಕ್ಷಣೆಗೆ ಸುಪ್ರೀಂಕೋರ್ಟ್ ಸೇರಿ ಹಲವು ಸಂಸ್ಥೆಗಳು ಅಪಾರ ಕಾಳಜಿ ವಹಿಸಿವೆ.

ಇವೆಲ್ಲದರ ಮಧ್ಯೆ ಅಪರೂಪದ ಅರಣ್ಯ ಸಂಪತ್ತು ಹೊಂದಿರುವ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಕೇರಳ ಮೂಲದ ದಂಧೆಕೋರರಿಂದ ಕಾಯ್ದಿಟ್ಟ ಅರಣ್ಯ ಪ್ರ್ರದೇಶದಲ್ಲಿ ಪರಿಸರದ ಮೇಲೆ ಭಾರೀ ಪ್ರಹಾರ ಉಂಟಾಗುತ್ತಿದೆ. ಕಾಯ್ದಿಟ್ಟ ಮೀಸಲು ಅರಣ್ಯ ವಿಭಾಗದ ಹಲವು ಎಕರೆಗಟ್ಟಲೆ ಜಾಗವನ್ನು ಅಕ್ರಮವಾಗಿ ಕೇರಳ ಮೂಲದ ದಂಧೆಕೋರರು ಗಣಿಗಾರಿಕೆಗೆ ಬಳಸಿಕೊಳ್ಳುತ್ತಿದ್ದರೂ ಅರಣ್ಯಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಅರಣ್ಯ ಹಾಗೂ ಇನ್ನಿತ್ತರ ಜನನಿಬಿಡ ಪ್ರದೇಶದಿಂದ ಕನಿಷ್ಟ ಮೂರು ಕಿ.ಮೀ. ದೂರದಲ್ಲಿ ಯಾವದೇ ಗಣಿಗಾರಿಕೆ ಹಾಗೂ ಇನ್ನಿತರ ಸ್ಫೋಟಕ ಕೆಲಸ ಕಾರ್ಯ ನಡೆಸಬಾರದೆಂಬ ನಿಯಮವಿದ್ದರೂ ಗಣಿಗಾರಿಕೆ ಎಷ್ಟು ನಡೆಯುತ್ತಿದೆ ಅನ್ನೋದಕ್ಕೆ ಲೆಕ್ಕವೇ ಇಲ್ಲ. ಈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಕಾರಿಕೆಯಿಂದ ಅಪಾಯದ ಮುನ್ಸೂಚನೆ ಇದೆ. ಹೀಗಿದ್ದೂ ಸರಿಯಾದ ಕ್ರಮ ವಹಿಸಿಲ್ಲ. ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಿಲ್ಲ.

ಅಕ್ರಮ ಗಣಿಗಾರಿಕೆ ಹಾಗೂ ಸಾಗಣೆ ಎಲ್ಲವೂ ನಮ್ಮ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕರ್ನಾಟಕ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.

ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದು ರಕ್ಷಿತಾರಣ್ಯದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಕೋಳಿತಟ್ಟು ಎಂಬ ಊರಿನ ರೆಂಡಾಕೈ ಸರ್ವೆ ನಂಬರ್ 28/1 ಎ2 ಎಂಬಲ್ಲಿ ಉಲಿಕ್ಕಲ್ ಸ್ಟೋನ್ ಕ್ರಶರ್ ಹೆಸರಿನಲ್ಲಿ 104 ಎಕರೆ ಸ್ಥಳವಿದ್ದು, ಕೆ.ಟಿ. ಅನಾಸ್, ಎಂ. ನಾರಾಯಣನ್, ರಮೆಶ್ ಗಾದಿ, ದಿಲಿಪ್ ಕುಮಾರ್ ಸೇರಿದಂತೆ 5 ಮಂದಿ ಪಾಲುದಾರರಿದ್ದಾರೆ.

ಫೈವ್ ಸ್ಟಾರ್ ಕ್ರಷರ್ ಪ್ಲಾಂಟ್, ವಾರ್ಡ್ ನಂ. 4 ರ ಮಾಲೀಕ ಉಲಿಕ್ಕಲ್‍ನ ಕೆ.ಕೆ. ಸುರೇಂದ್ರನ್ ಅವರ ಮಾಲೀಕತ್ವದಲ್ಲಿ 67 ಎಕರೆ ಗಣಿಗಾರಿಕೆ ಇದ್ದು, ಹಿಂದೂಸ್ಥಾನ್ ಸ್ಟೋನ್ ಪ್ಲಾಂಟ್ ವಾರ್ಡ್ ಸಂಖ್ಯೆ 4 ರಲ್ಲಿ 37 ಎಕರೆ ಸ್ಥಳದಲ್ಲಿ ಉಳಿಕ್ಕಲ್‍ನ ಪೆರಟ್ಟಾ ಮೂಲದ ಉಬೈದ್ ಎಂಬವರು ನಡೆಸುತ್ತಿದ್ದಾರೆ.

ಸುಮಾರು 12 ವಿವಿಧ ಸಂಸ್ಥೆಗಳಿಂದ ಪರವಾನಗಿ ಪಡೆದು ಸ್ಫೋಟಕ ಅಳವಡಿಸಬೇಕು ಎಂಬ ನಿಯಮವಿದೆ. ಇದನ್ನೆಲ್ಲಾ ಗಾಳಿಗೆ ತೂರಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆಗೆ ಮುಖ್ಯವಾಗಿ ಬೇಕಾಗಿದ್ದು ನೀರು, ಅದು ನಮ್ಮ ಕೊಡಗಿನ ನೀರನ್ನು ಬಳಸಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಕರ್ನಾಟಕದ ಗಡಿಯಲ್ಲಿ ಯಾವದೇ ಬೇಲಿ ಇಲ್ಲ. ಗಣಿಗಾರಿಕೆ ಮಾಡುತ್ತಿರುವ ವ್ಯಕ್ತಿಗಳು ತಾವೇ ಬೇಲಿ ನಿರ್ಮಾಣ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಹೊಸ ಮುಖಗಳು ಅಲ್ಲಿ ಪ್ರವೇಶ ಮಾಡಿದಲ್ಲಿ ನಿರ್ಬಂಧ ಹೇರುತ್ತಾರೆ. ಅಲ್ಲಲ್ಲಿ ನಾಮಫಲಕ ಅಳವಡಿಸಿದ್ದಾರೆ. ಫೋಟೋ ಹಾಗೂ ಚಿತ್ರಿಕರಣ ಮಾಡದಂತೆ ಗದರುತ್ತಾರೆ.

3 ರಿಂದ 4 ಕ್ವಾರೆಗಳಲ್ಲೂ ಪಾರದರ್ಶಕತೆ ಇಲ್ಲವಾಗಿದ್ದು, ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅರಣ್ಯ ಇಲಾಖೆ ನೀಡಿರುವ ಬೆಂಬಲ ದಂಧೆಗೆ ಪ್ರಮುಖ ಕಾರಣವಾಗಿದೆ. ಸ್ಥಳೀಯ ಸಾರ್ವಜನಿಕರು ಮರಳು ಕೇಳಿದರೂ ಸಾಗಣೆ ಅನುಮತಿ ಸಿಗುತ್ತಿಲ್ಲ. ಯಾವದಾದರೂ ಕಟ್ಟಡ ಕಟ್ಟಲು ಮರಳು ಜಲ್ಲಿಯ ಸಮಸ್ಯೆಯನ್ನು ಹೇಳುತ್ತಾರೆ.

ಆದರೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವದು ಕಂಡರೂ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಿದೆ. ಕೂಟುಹೊಳೆಯಲ್ಲಿ ಹೊಸ ಸೇತುವೆ ಕಟ್ಟಲು ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ನಾಶದ ನೆಪವೊಡ್ಡಿ ಕಾಮಗಾರಿಗೆ ತಡೆಯೊಡ್ಡಿದ್ದು, ಗಣಿಗಾರಿಕೆ ನಡೆಸುವವರು ಅದೇ ಅರಣ್ಯ ಒತ್ತುವರಿ ಮಾಡಿಕೊಂಡಿ ರುವದನ್ನು ಪ್ರಶ್ನಿಸದೆ ಇರುವದು ಹಾಗೂ ಕ್ರಮಕ್ಕೆ ಮುಂದಾಗದೇ ಇರುವದು ವಿಪರ್ಯಾಸವೇ ಸರಿ. ಇದು ಇಲಾಖೆಯ ಪಾರದರ್ಶಕತೆಗೆ ಹಿಡಿದ ಕನ್ನಡಿ ಅಂತ ಹೇಳಬಹುದೇನೋ.

ಸರಕಾರ ರೂಪಿಸಿದ ಮರಳು ವಿತರಣೆ ನೀತಿ ಸಂಪೂರ್ಣ ಕ್ವಾರೆಯಲ್ಲಿ ಉಲ್ಲಂಘನೆಗೊಂಡಿದೆ. ಸಂಬಂಧಪಟ್ಟವರು ನಿಗಾವಹಿಸಿಲ್ಲ ಎಂಬದಕ್ಕೆ ಕ್ವಾರೆಯಲ್ಲಿನ ಅಕ್ರಮ ಸಾಕ್ಷ್ಯ ಹೇಳುತ್ತಿವೆ. ಕ್ವಾರೆ ಸ್ಥಳ ಪರಿಶೀಲಿಸಿದರೆ ಅಕ್ರಮದ ಮಾಹಿತಿ ಗೊತ್ತಾಗುತ್ತದೆ. ಪರ್ಮಿಟ್ ಇಲ್ಲದೆ ಜಲ್ಲಿ ಕಲ್ಲು ಎಂಸ್ಯಾಂಡ್ ಸಾಗಿಸುವ ದಂಧೆಗೆ ಅರಣ್ಯ ಇಲಾಖೆಯು ಶಾಮೀಲಾಗಿದೆ. ಹಗಲು ದರೋಡೆ ನಡೆಯುತ್ತಿದ್ದರೂ ಅಧಿಕಾರಿಗಳು ಸುಮ್ಮನೆ ಕುಳಿತು ಕೊಂಡಿದ್ದಾರೆ. ಗಡಿಯಲ್ಲಿ ಕಣ್ಣಿನ ಮುಂದೆ ಅನ್ಯಾಯ ನಡೆಯುತ್ತಿದ್ದರೂ ನೋಡಿಕೊಂಡಿರಲು ನಮ್ಮಿಂದ ಸಾಧ್ಯವಿಲ್ಲ ಎಂದು ಸ್ಥಳಿಯರಾದ ಚೊಟ್ಟೆಪಂಡ ಬಿಪಿನ್, ಚೇಮೀರ ಪ್ರಕಾಶ್, ಬೊಪ್ಪಂಡ ವಸಂತ, ಪೊನ್ನಕಚ್ಚಿರ ಬಿದ್ದಪ್ಪ, ಚೊಟ್ರಂಡ ರನ್ನು ಇನ್ನು ಕೆಲವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಈ ಗಣಿಗಾರಿಕೆ ನಿಲ್ಲಿಸದೇ ಇದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಹೊಸ ಬಾಕ್‍ಗಳಿಗೆ ಪರವಾನಗಿ ನೀಡಬಾರದೆಂದು ಈ ಹಿಂದೆ ಹೈಕೋರ್ಟ್ ಸೂಚಿಸಿತ್ತು. ಆದರೆ, ವಿಭಾಗೀಯ ಪೀಠವು ಪರಿಸರ ಹಾನಿಯಾಗುವ ಬಗ್ಗೆ ಎಚ್ಚರಿಕೆ ವಹಿಸಿ ಪರವಾನಗಿ ನೀಡಬಹುದು ಎಂದು ಹೇಳಿತ್ತು.

ಇದನ್ನೇ ಮುಂದಿಟ್ಟು ಕೊಂಡು, ಅರಣ್ಯ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಹೊಸ ಗಣಿಗುತ್ತಿಗೆ ನಡೆಸುವ ಸಾಹಸಕ್ಕೆ ಪರವಾನಗಿ ಪಡೆಯದೆಯೂ ಗಣಿಗಾರಿಕೆ ನಡೆಸುತ್ತಿದೆ.

ಕಳೆದ 10-15 ವರ್ಷಗಳ ಉಂಟಾದ ಪರಿಸರ ಹಾನಿ, ಮತ್ತೆಂದೂ ಸುಧಾರಿಸದ ಮಟ್ಟಿಗೆ ಜನಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಮತ್ತೆ ನೂರಾರು ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಗಡಿಭಾಗದ ಸುಂದರ ಪ್ರಕೃತಿ ವೈಭವ ಮತ್ತಷ್ಟು ಹದಗೆಡುವ ಜತೆಗೆ ಗಣಿಧೂಳು ಮೆತ್ತಿಕೊಳ್ಳಲಿದೆ. ನಿಯಮಗಳನ್ನು ಗಾಳಿಗೆ ತೂರಿ ನಿಗದಿತ ಪ್ರಮಾಣಕ್ಕಿಂತ ಅತೀ ಹೆಚ್ಚು ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ಕೈಗೊಂಡ ಸಂಸ್ಥೆಗಳ ಗಣಿ ಚಟುವಟಿಕೆಗೆ ‘ಬ್ರೇಕ್’ ಹಾಕುವ ಕೆಲಸ ಆಗಬೇಕಿದೆ..

ಸಾಲು ಸಾಲು ಅಕ್ರಮ: ನಿಯಮಾನುಸಾರ ಗುತ್ತಿಗೆ ಸಂಸ್ಥೆಗಳು ಗಣಿಗಾರಿಕೆ ಕೈಗೊಂಡಿರುವ ಪ್ರದೇಶದಲ್ಲಿ ಗಡಿ ಗುರುತು ಮಾಡಿಕೊಂಡಿಲ್ಲ. ಪರಿಸರಾತ್ಮಕ ಅಂಶಗಳನುಸಾರ ನೀಡಿದ ಅನುಮತಿ ಯೋಜನೆ (ಇಸಿ ಪ್ಲಾನ್) ಉಲ್ಲಂಘನೆಯಾಗಿದೆ. ಮುಖ್ಯವಾಗಿ ಮಿತಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸಿರುವದರಿಂದ ಪರಿಸರಕ್ಕೆ ತೀವ್ರ ಹಾನಿಯಾಗಿರುವದು ಮತ್ತು ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿ ಅಪಾಯಕಾರಿ ಸ್ಥಿತಿಯಲ್ಲೇ ಗಣಿಗಾರಿಕೆ ನಡೆಸುತ್ತಿರುವದು ಕಂಡುಬರುತ್ತಿದೆ. ಸಮರ್ಪಕವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸದ ಕಾರಣ ಅಪಾಯಕಾರಿ ಮಾರ್ಗದಲ್ಲೇ ಕಲ್ಲು, ಜಲ್ಲಿ ಕಲ್ಲು, ಎಂಸ್ಯಾಂಡ್ ಸಾಗಿಸು ತ್ತಿರುವದು, ಭಾರೀ ಪ್ರಮಾಣದಲ್ಲಿ ಸ್ಫೋಟ ನಡೆಸಿ ನಿಯಮ ಉಲ್ಲಂಘಿಸಿ ರುವದು ಬೆಳಕಿಗೆ ಬಂದಿದೆ.

ಕ್ವಾರೆಯಿಂದ ಕ್ರಷರ್‍ಗೆ ಹಾಗೂ ಕ್ರಷರ್‍ನಿಂದ ಹೊರಕ್ಕೆ ಸಾಗಿಸಿ ಮಾರಾಟ ಮಾಡಿರುವ ಕಲ್ಲಿನ ಪ್ರಮಾಣ ಕುರಿತಂತೆ ಮಾಹಿತಿ, ದಾಖಲೆ ಪರಿಶೀಲನೆ ಮಾಡಬೇಕು, ಇದರ ಹಿಂದೆ ಕೆಲವು ಪ್ರಭಾವಿ ವ್ಯಕ್ತಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಈ ಅಕ್ರಮ ಗಣಿಗಾರಿಕೆ ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರಿಂದಲೂ ದೂರು: ಭಾರೀ ತೀವ್ರತೆಯ ಸ್ಫೋಟಕಗಳನ್ನು ಬಳಸುವದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಸ್ಫೋಟಕ ಬಳಸಿ ಬಂಡೆಗಳನ್ನು ಸಿಡಿಸುತ್ತಿರುವದರಿಂದ ತೊಂದರೆಯಾಗುತ್ತದೆ. ಧೂಳಿನ ಸಮಸ್ಯೆ ತೀವ್ರವಾಗಿದ್ದು, ಭಾರೀ ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬದಾಗಿ ಸ್ಥಳೀಯರು ಹೇಳುತ್ತಾರೆ.

- ರಜಿತಾ ಕಾರ್ಯಪ್ಪ