ಮಡಿಕೇರಿ, ಡಿ 25: ಜನವರಿ 10 ರಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ಪ್ರದೇಶಗಳಿಗೆ ಭೇಟಿ ನೀಡುವ ಧರ್ಮಾಧಿಕಾರಿಗಳು ಪ್ರಕೃತಿ ವಿಕೋಪಕ್ಕೊಳಗಾದ ಸಂತ್ರಸ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಅನುದಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ತಿಳಿಸಿದ್ದಾರೆ.
ಅವರು ಮಡಿಕೇರಿಯ ಮಹದೇವಪೇಟೆಯಲ್ಲಿರುವ ಯೋಜನೆಯ ಸೇವಾ ಕೇಂದ್ರ ಕಛೇರಿಯಲ್ಲಿ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಕ್ಷೇತ್ರದಿಂದ ರೂ. 10 ಕೋಟಿ ಸಹಾಯಧನ ಬಿಡುಗಡೆಯಾಗಿದ್ದು, ಈಗಾಗಲೆ ರೂ. 2 ಕೋಟಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲಾಗಿದೆ. ಉಳಿದ ರೂ. 8 ಕೋಟಿ ಹಣವನ್ನು ಜಿಲ್ಲೆಯ ಅಂದಾಜು ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ವಿತರಿಸಲಾಗುವದು ಎಂದು ತಿಳಿಸಿದ್ದಾರೆ.
ಈ ಸಂಬಂಧ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಸುಮಾರು 1200 ಮನೆಗಳಿಗೆ ತೆರಳಿ ಪ್ರಕೃತಿ ವಿಕೋಪಕ್ಕೊಳಗಾದ ಸಂತ್ರಸ್ತರ ವಾಸ್ತವಾಂಶದ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿರುವ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೀಶ್, ಪೂರ್ಣ ಮನೆ ಹಾನಿಗೊಂಡವರಿಗೆ ರು 25 ಸಾವಿರ, ಕೃಷಿ ಹಾನಿ, ಭಾಗಶಃ ಹಾನಿಗೊಳಗಾದ ಸಂತ್ರಸ್ತರಿಗೆ ಸೇರಿದಂತೆ ಒಟ್ಟು 8 ಕೋಟಿ ರೂ. ಗಳನ್ನು ವಿತರಿಸಲಾಗುವದು. ಜನವರಿ 10 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿರುವ ಅನುದಾನ ವಿತರಣಾ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಸಾಂಕೇತಿಕವಾಗಿ ಸಂತ್ರಸ್ತರಿಗೆ ಅನುದಾನ ವಿತರಣೆ ಮಾಡುವರು. ಈ ನಿಟ್ಟಿನಲ್ಲಿ ಈಗಾಗಲೆ ಸಂತ್ರಸ್ತರ ಪಟ್ಟಿ ತಯಾರಿಸಲಾಗಿದ್ದು, ಕಾರ್ಯಕ್ರಮಕ್ಕೂ ಮುನ್ನ ಸಂತ್ರಸ್ತರ ಖಾತೆಗಳಿಗೆ ಹಣ ಜಮಾ ಮಾಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಪ್ರಕೃತಿ ವಿಕೋಪಕ್ಕೊಳಗಾದ ಗ್ರಾಮಗಳಿಗೆ ಹೆಗ್ಗಡೆಯವರು ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ನಗರಸಭೆ ಸದಸ್ಯರಾದ ಜುಲೇಕಾಬಿ, ಲೀಲಾ ಶೇಷಮ್ಮ, ಜನಜಾಗೃತಿ ವೇದಿಕೆಯ ಸದಸ್ಯ ಎಂ.ಎನ್. ಚಂದ್ರಮೋಹನ್, ಯೋಜನಾಧಿಕಾರಿಗಳಾದ ಸದಾಶಿವಗೌಡ, ವೈ.ಪ್ರಕಾಶ್, ಕಡಗದಾಳು ಜಯಪ್ಪ, ಮೇಲ್ವಿಚಾರಕಿ ಜಯಶ್ರೀ, ಮಡಿಕೇರಿ, ಮೂರ್ನಾಡು ವಲಯ, ಒಕ್ಕೂಟದ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು, ವಲಯ ಮೇಲ್ವಿಚಾರಕರುಗಳು ಉಪಸ್ಥಿತರಿದ್ದರು.