ಗೋಣಿಕೊಪ್ಪ ವರದಿ, ಡಿ. 25 : ಆಲ್ಇಂಡಿಯಾ ಅಂತರ್ ವಿಶ್ವ ವಿದ್ಯಾಲಯ ಮಟ್ಟದ ಬಾಲಕಿಯರ ಹಾಕಿ ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದ್ದು, ಕರ್ನಾಟಕ ರಾಜ್ಯದಿಂದ ಅರ್ಹತೆ ಪಡೆದ ಏಕೈಕ ತಂಡವಾಗಿರುವ ಮಂಗಳೂರು ವಿಶ್ವ ವಿದ್ಯಾಲಯ ತಂಡವು ಬುಧವಾರ ತನ್ನ ಮೊದಲ ಪಂದ್ಯ ಆಡಲಿದೆ. ತಂಡದಲ್ಲಿ ಕೊಡಗಿನ ಆಟಗಾರರು ಮಾತ್ರ ಇರುವದು ವಿಶೇಷತೆಯಾಗಿದೆ. ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಟೂರ್ನಿ ನಡೆಯಲಿದ್ದು, ಮಂಗಳೂರು ವಿವಿ ತಂಡವು ಹೆಚ್ಚು ಬಲಿಷ್ಠವಾಗಿರುವದು ಕುತೂಹಲ ಮೂಡಿಸಿದೆ.
ಇತ್ತೀಚೆಗಷ್ಟೆ ತಮಿಳುನಾಡಿನ ಕಾರಕುಡಿ ಅಳಗಪ್ಪ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಟೂರ್ನಿಯಲ್ಲಿ ಅಣ್ಣ ವಿವಿ ತಂಡವನ್ನು ಮಣಿಸಿ ಫೈನಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಆಲ್ಇಂಡಿಯಾ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.
ತಂಡದ ನಾಯಕರಾಗಿ ಪೂಜಾ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಕಿರಿಯ ತಂಡದಲ್ಲಿ ಆಡಿರುವ ಮಲ್ಲಮಾಡ ಲೀಲಾವತಿ ತಂಡದಲ್ಲಿರುವದು ಹೆಚ್ಚಿನ ಬಲ ತುಂಬಿದೆ. ಉಳಿದಂತೆ ಎಂ. ಪಾರ್ವತಿ, ಕುಮುದಾ, ಎನ್. ನಿವೇದಿತಾ, ಮಲ್ಲಮಾಡ ಲೀಲಾವತಿ, ಎಂ. ಎಸ್. ಕೀರ್ತನಾ, ಕೆ. ಎಸ್. ವಿದ್ಯಾ, ಪಿ. ಎ. ಪವಿತ್ರ, ಪ್ರಿಯಾ ದರ್ಶಿನಿ, ಸಿ. ಜೆ. ಸಂಗೀತಾ, ಕೆ.ಪಿ. ಮಿಲನಾ, ಆರ್. ಚೆಲುವಾಂಭ, ಪಿ. ಸಿ. ನಿಶಾ, ತಂಡದಲ್ಲಿದ್ದಾರೆ. ವ್ಯವಸ್ಥಾಪಕರಾಗಿ ಕಂಬೀರಂಡ ರಾಖಿ ಪೂವಣ್ಣ, ತಂಡದ ನಾಯಕಿಯಾಗಿ ಪೂಜಾ, ತರಬೇತುದಾರರಾಗಿ ಮೂಕಚಂಡ ನಿರನ್ ನಾಚಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಿಶೋರ್, ಸಹಾಯಕ ನಿರ್ದೇಶಕರಾಗಿ ರಮೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಪ್ರದರ್ಶನ ಬಗ್ಗೆ ಕುತೂಹಲ ಮೂಡಿಸಿದೆ. -ಸುದ್ದಿಪುತ್ರ