ಗೋಣಿಕೊಪ್ಪಲು, ಡಿ. 23: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗಡಿಗ್ರಾಮ ಕಾರ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವ ಮೂಲಕ ಆತಂಕಕ್ಕೆ ಕಾರಣವಾಗಿದೆ. ಈ ಕನ್ನಡ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹಲವು ಮೂಲಭೂತ ಸೌಲಭ್ಯ ಗಳಿಂದ ಶಾಲೆ ವಂಚಿತವಾಗಿದೆ. ಶಾಲಾ ಅಭಿವೃದ್ಧಿ ಬಗ್ಗೆ ಇಲ್ಲಿನ ಪ್ರಮುಖ ಗ್ರಾಮಸ್ಥರ ನೆರವು ಹೊಂದು ವಲ್ಲಿಯೂ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಹಿಂದೆ ಬಿದ್ದಿದ್ದು, ಈ ಹಿಂದೆ ನೂರಕ್ಕೂ ಅಧಿಕವಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 26ಕ್ಕೆ ಕುಸಿದಿದೆ.

ನಾಗರಹೊಳೆ ಸರಹದ್ದಿನಲ್ಲಿ ಬರುವ ನಿಟ್ಟೂರು ಗ್ರಾ.ಪಂ.ವ್ಯಾಪ್ತಿಯ ಕೊಲ್ಲಿಹಾಡಿ, ತಟ್ಟೆಕೆರೆ, ಬೊಮ್ಮಾಡು, ಮೂರ್ಕಲ್ಲು ಇತ್ಯಾದಿ ಹಾಡಿಗ ಳಿಂದಲೇ ಮಕ್ಕಳು ಈ ಶಾಲೆಗೆ ಬರ ಬೇಕಿದೆ. ಆದರೆ, ಹೆಚ್ಚಿನ ಕುಟುಂಬ ಗಳು ಈಗಾಗಲೇ ನಾಗರಹೊಳೆ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಗೊಂಡಿರುವ ಹಿನ್ನೆಲೆ ಕಾರ್ಮಾಡು ಶಾಲೆಯ ದಾಖಲಾತಿಗೆ ವಿದ್ಯಾರ್ಥಿ ಗಳ ಕೊರತೆಗೆ ಕಾರಣವಾಗಿದೆ. ಕಾರ್ಮಾಡು ಸುತ್ತಮುತ್ತಲು ಕಾಫಿ ತೋಟ ಕಾರ್ಮಿಕರು ಒಳಗೊಂಡಂತೆ ಸುಮಾರು 150 ಕುಟುಂಬ ಮಾತ್ರ ಇದೀಗ ವಾಸವಿದೆ ಎನ್ನಲಾಗುತ್ತಿದೆ.

ಇಲ್ಲಿನ 1ನೇ ತರಗತಿಯಲ್ಲಿ ಓರ್ವಳೇ ಬಾಲಕಿ, 2ನೇ ತರಗತಿ ಯಲ್ಲಿ 3 ಬಾಲಕರು ಹಾಗೂ ಓರ್ವ ಬಾಲಕಿ, 3ನೇ ತರಗತಿಯಲ್ಲಿ ಇಬ್ಬರು ಬಾಲಕರು ಹಾಗೂ ಓರ್ವ ಬಾಲಕಿ, 4ನೇ ತರಗತಿಯಲ್ಲಿ 5 ಬಾಲಕರು ಹಾಗೂ ನಾಲ್ವರು ಬಾಲಕಿಯರು, 5ನೇ ತರಗತಿಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 6ನೇ ತರಗತಿಯಲ್ಲಿ ಓರ್ವ ಬಾಲಕ ಹಾಗೂ ನಾಲ್ವರು ಹೆಣ್ಣುಮಕ್ಕಳು ಮತ್ತು 7ನೇ ತರಗತಿಯಲ್ಲಿ ಓರ್ವ ಬಾಲಕ, ಓರ್ವ ಬಾಲಕಿಯರಿದ್ದು, ಇದೀಗ ಮೂವರು ಶಿಕ್ಷಕರಿದ್ದಾರೆ.

ಇಲ್ಲಿನ ಶಾಲಾಭಿವೃದ್ಧಿ ಸಮಿತಿಗೂ ಶಾಲಾ ದಾಖಲಾತಿ ಕುಸಿತದ ಬಗ್ಗೆ ಆತಂಕ ಕಾಡಿದಂತೆ ಕಾಣುತ್ತಿಲ್ಲ. ಈ ಹಿಂದೆ ಬಹುತೇಕ ದಾನಿಗಳ ಕೊಡುಗೆಯಿಂದಲೇ ಸ್ಥಾಪನೆಗೊಂಡ ಶಾಲೆ ಇದೀಗ ಹಲವು ಮೂಲಭೂತ ಸಮಸ್ಯೆಗಳಿಂದ ಜರ್ಜರಿತಗೊಂಡಿದೆ. ಸುಮಾರು 1 ಎಕರೆ ವಿಸ್ತೀರ್ಣ ಹೊಂದಿರುವ ಶಾಲೆಯ 60 ಸೆಂಟ್ ಜಾಗದಲ್ಲಿ ಕಾಫಿ ತೋಟವಿದ್ದು ಈ ಬಾರಿ ರೂ.13 ಸಾವಿರ ಮೊತ್ತಕ್ಕೆ ಗುತ್ತಿಗೆದಾರರಿಗೆ ನಿರ್ವಹಣೆಯನ್ನು ವಹಿಸಿ ಕೊಡಲಾಗಿದೆ. ಶಾಲೆಗೆ ದಾಖಲಾತಿ ಕೊರತೆಯೊಂದಿಗೆ ಮತ್ತೊಂದು ಸಮಸ್ಯೆ ಎಂದರೆ ಇಲ್ಲಿ ದೈಹಿಕ ಶಿಕ್ಷಕಿ ಇದ್ದರೂ ಮಕ್ಕಳು ಮೈದಾನದಲ್ಲಿ ಆಟವಾಡದೆ ವರ್ಷಗಳೇ ಉರುಳಿವೆ. ಈ ಬಗ್ಗೆ ಮುಖ್ಯ ಶಿಕ್ಷಕಿ ಆರ್.ವಿ. ಶಿಲ್ಪಾ ಅವರನ್ನು ಪ್ರಶ್ನಿಸಿದರೆ, 7 ನೇ ತರಗತಿವರೆಗೆ ಪಠ್ಯ ಬೋಧನೆಗೆ ಶಿಕ್ಷಕರ ಕೊರತೆ ಹಿನ್ನೆಲೆ ಹಾಗೂ ಶಿಕ್ಷಣ ಇಲಾಖೆ ನಿರ್ದೇಶನದಂತೆ ಪಠ್ಯಕ್ರಮ ಅಳವಡಿಕೆ ಹಿನ್ನೆಲೆ ಕ್ರೀಡೆಗೆ ಒತ್ತು ನೀಡಲು ಕಷ್ಟಸಾಧ್ಯವಾಗಿದೆ ಎಂದು ಹೇಳುತ್ತಾರೆ.

ಆದರೆ ಇದೀಗ ಕೇಂದ್ರ ಸರ್ಕಾರವೇ ಮಕ್ಕಳ ಶೈಕ್ಷಣಿಕ ಚಟು ವಟಿಕೆಯೊಂದಿಗೆ ದೈಹಿಕ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಪಾಠ ದೊಂದಿಗೆ ಸಿಂಹಪಾಲು ಕ್ರೀಡಾ ಚಟುವಟಿಕೆಗೂ ಒತ್ತು ನೀಡಬೇಕಾಗಿದೆ ಎಂದು ಘೋಷಣೆ ಮಾಡಿದೆ. ಮುಂದಿನ ದಿನದಲ್ಲಾದರೂ ಕಾರ್ಮಾಡು ಮಕ್ಕಳಿಗೆ ಆಟವಾಡಲು ಅವಕಾಶ ಮಾಡಿಕೊಡಬೇಕಾಗಿದೆ. ಕಳೆದ 9 ವರ್ಷದಿಂದ ಇಲ್ಲಿ ದೈಹಿಕ ಶಿಕ್ಷಕಿಯಾಗಿ ಯಲ್ಲವ್ವ ಕರೆಕುಲ್ಲದ್ ಉದ್ಯೋಗದಲ್ಲಿದ್ದಾರೆ. ಆದರೆ, ಮೈದಾನದಲ್ಲಿ ಕಾಣಿಸಿಕೊಂಡಿರುವದು ಕಡಿಮೆಯೆ!?

ಮೈದಾನದ ಶೋಚನೀಯ ಸ್ಥಿತಿ!

ಶಾಲೆಯ ಆಚೆ ಬದಿ ರಸ್ತೆ ದಾಟಿದರೆ ಒಂದು ಆಟದ ಮೈದಾನ ವಿದೆ. ಮೈದಾನದ ಸಮೀಪದಲ್ಲಿಯೇ ನಿಟ್ಟೂರು ಗ್ರಾ.ಪಂ.ಕಟ್ಟಡವಿದೆ. ಕುಡಿಯುವ ನೀರಿನ ಟ್ಯಾಂಕ್ ಅಥವಾ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಪಂಚಾಯಿತಿ ಆಸುಪಾಸಿನಲ್ಲಿ ಸಾಕಷ್ಟು ನಿವೇಶನವಿದ್ದರೂ ಯಾರದೋ ಮಾತು ನಂಬಿ ಮೈದಾನದ ಒಂದು ಭಾಗವನ್ನು ಆಕ್ರಮಿಸಿ ನೀರು ಸಂಗ್ರಹಣಾ ಟ್ಯಾಂಕನ್ನು ಗ್ರಾ.ಪಂ.ಅಧ್ಯಕ್ಷೆ ಕಾಡ್ಯಮಾಡ ಅನಿತಾ ಅವಧಿಯಲ್ಲಿ 2016ರಲ್ಲಿಯೇ ನಿರ್ಮಾಣ ಮಾಡಲಾಗಿದೆ. ಆದರೆ, ಈವರೆಗೂ ಟ್ಯಾಂಕ್ ಸಾರ್ವಜನಿಕ ಸೇವೆಗೆ ಬಳಕೆಯಾಗಿಲ್ಲ. ಪೈಪ್‍ಲೈನ್ ಕಾರ್ಯವೂ ನಡೆದಿಲ್ಲ. ಇಷ್ಟೇ ಆದರೂ ಪರವಾಗಿಲ್ಲ. ವಾಟರ್ ಟ್ಯಾಂಕ್ ನಿರ್ಮಾಣ ಸಂದರ್ಭ ವೀರಾಜಪೇಟೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿಯನ್ನು ಹೊಂದಿಲ್ಲ ಎನ್ನಲಾಗಿದೆ. ಇದೀಗ ಶಾಲೆಯ ನಿಕಟ ಸಂಪರ್ಕ ಹೊಂದಿರುವ ಸಮಾಜ ಸೇವಕ ಶರೀನ್ ಮುತ್ತಣ್ಣ ಕೊಟ್ಟಂಗಡ ಮಧು ಮಂಜುನಾಥ್ ಅವರು ನಿಷ್ಪ್ರಯೋಜಕ ಟ್ಯಾಂಕ್ ತೆರವುಗೊಳಿಸಲು ಅಧ್ಯಕ್ಷೆಗೆ ಮನವಿ ಮಾಡಿದ್ದಾರೆ. ಇದೇ ಮೈದಾನ ಸಜ್ಜುಗೊಳಿಸಲು ಸುಮಾರು 450 ಟ್ರ್ಯಾಕ್ಟರ್ ಮಣ್ಣನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸುರಿದು ಶರೀನ್ ಮುತ್ತಣ್ಣ ಸಹಕಾರ ನೀಡಿದ್ದರು. ಶಾಲೆಯ ಮಾಡು ದುರಸ್ತಿಗೊಳಗಾದ ಸಂದರ್ಭ, ಪಾಕಶಾಲೆಗೆ ಉಚಿತ ಕುಕ್ಕರ್ ಇತ್ಯಾದಿ ನೀಡುವ ಮೂಲಕ ಕನ್ನಡ ಶಾಲೆಗೆ ಶರೀನ್ ನೆರವು ನೀಡಿದ್ದರು. ಆದರೆ, ಈಗೀಗ ಶಾಲೆಯ ವಿಚಾರವಾಗಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಮುಖ್ಯ ಶಿಕ್ಷಕಿ ಬಳಿ ತಮ್ಮ ಅಸಮಾ ಧಾನವನ್ನು ಬಹಿರಂಗವಾಗಿಯೇ ಈಚೆಗೆ ವ್ಯಕ್ತಪಡಿಸಿರುವ ಪ್ರಕರಣವೂ ನಡೆದಿದೆ.

ಶಾಲಾ ಮುಖ್ಯ ಶಿಕ್ಷಕಿ ಶಿಲ್ಪಾ ಅವರು ಪ್ರತಿಕ್ರಿಯೆ ನೀಡಿ, ಮಕ್ಕಳ ಶಾಲಾ ಹಾಜರಾತಿ ಬಗ್ಗೆ ತಮ್ಮ ಮೇಲೆ ತೀವ್ರ ಒತ್ತಡವಿದೆ. ಮಕ್ಕಳ ವಿದ್ಯಾರ್ಥಿವೇತನ ಹಾಗೂ ಪಠ್ಯಪುಸ್ತಕ ವಿತರಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ನೀಡಬೇಕಾಗಿದೆ. ಕೆಲವು ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಜಾತಿ ದೃಢೀಕರಣ ಇತ್ಯಾದಿ ಗಳನ್ನು ಇನ್ನೂ ನೀಡದಿರುವದೂ ತೊಂದರೆಯಾಗಿದೆ.

ಎಲ್ಲ ಮಕ್ಕಳನ್ನು ಪ್ರೀತಿಯಿಂದ ನೋಡಲಾಗುತ್ತಿದ್ದು, ದಂಡಿಸುವ ಉದ್ಧೇಶ ಇಲ್ಲ. ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳುವದು ಪೆÇೀಷಕರ ಜವಾಬ್ದಾರಿ. ಆದರೆ, ಈ ವರ್ಷ ಮೂರು ಬಾರಿ ಪೆÇೀಷಕರ ಸಭೆ ಕರೆದರೂ ಹೆಚ್ಚಿನ ತಂದೆ ತಾಯಿಗಳು ಮಕ್ಕಳ ವಿದ್ಯಾರ್ಜನೆಯ ಬಗ್ಗೆ ತಿಳಿದುಕೊಳ್ಳಲು ಶಾಲೆಗೆ ಬರುತ್ತಿಲ್ಲ ಎಂದರು.

ಕಾರ್ಮಾಡು ಶಾಲೆಯ ಬಾಲಕ, ಬಾಲಕಿಯರ ಶೌಚಾಲಯವೂ ದುರಸ್ತಿಗೊಳಗಾಗಿದ್ದು, ಅಲ್ಲೆಲ್ಲಾ ಶುಚಿತ್ವದ ಕೊರತೆ ಕಂಡುಬರುತ್ತಿದೆ. ಈ ಬಗ್ಗೆ ಖುದ್ದು ವೀಕ್ಷಿಸಿದ ಅಧ್ಯಕ್ಷೆ ಅನಿತಾ ಅವರು ಗ್ರಾ.ಪಂ. ವತಿಯಿಂದ ದುರಸ್ಥಿಗೆ ಸಹಕರಿಸುವದಾಗಿ ಇದೇ ಸಂದರ್ಭ ಭರವಸೆ ನೀಡಿದ್ದಾರೆ.

ಶಾಲೆಯ ಆವರಣದಲ್ಲಿ ಶುಚಿತ್ವದ ಕೊರತೆ, ನೆಲಹಾಸು ಕಿತ್ತುಹೋಗಿದೆ, ಶಾಲಾ ಮಾಡು ಶಿಥಿಲಾವಸ್ಥೆಯಲ್ಲಿದೆ ಇದೆಲ್ಲವನ್ನೂ ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿಗಳು ಖುದ್ದು ವೀಕ್ಷಿಸಿ ಕ್ರಿಯಾಯೋಜನೆ ತಯಾರಿಸ ಬೇಕಾಗಿದೆ. ಮತ್ತೋರ್ವ ಶಿಕ್ಷಕರ ಕೊರತೆಯೂ ಇದೆ. ಇಲ್ಲಿ ಗುತ್ತಿಗೆ ಆಧಾರದ ಆಶಾ ಶಿಕ್ಷಕಿ ಇದ್ದು ಅಕ್ಷರ ದಾಸೋಹ ನೋಡಿಕೊಳ್ಳಲು ಇಬ್ಬರು ಸಿಬ್ಬಂದಿಗಳಿದ್ದಾರೆ. ಸರ್ಕಾರವೂ ತಲಾ 30 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಎಂದು ಕಾನೂನು ಜಾರಿ ಮಾಡಿದ್ದು ಇಲ್ಲಿ 26 ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿರುವದು ಸಮಾಧಾನ ಕರವಾದರೂ 7 ನೇ ತರಗತಿವರೆಗೆ ಪಠ್ಯ ಪ್ರವಚನಕ್ಕೆ ಇರುವ ಶಿಕ್ಷಕರಿಗೆ ಹೆಚ್ಚು ಒತ್ತಡ ಎದುರಾಗಿದೆ.

ಕಾರ್ಮಾಡುವಿನಲ್ಲಿಯೇ ಕಳೆದ ವರ್ಷದಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಗಿರಿಜನ ವಸತಿ ಆಶ್ರಮ ಶಾಲೆ ಕಳೆದ ವರ್ಷದಿಂದ ಆರಂಭಗೊಂಡಿದ್ದು 59 ಬಾಲಕಿಯರು, 48 ಬಾಲಕರು ಒಳಗೊಂಡಂತೆ ಒಟ್ಟು 107 ಮಂದಿ ಗಿರಿಜನ ಮಕ್ಕಳಿದ್ದಾರೆ. ಅದರ ಸಮೀಪವೇ ಗಿರಿಜನ ಬಾಲಕಿಯರ ವಸತಿ ನಿಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು 50 ವಿದ್ಯಾರ್ಥಿನಿಯರಿಗೆ ಸ್ಥಳಾವಕಾಶ ಇದ್ದರೂ 29 ವಿದ್ಯಾರ್ಥಿನಿ ಯರಿದ್ದಾರೆ.

ಆದರೆ, ಇಲ್ಲಿನ ಮಕ್ಕಳು ಹೆಚ್ಚಾಗಿ ಕಾರ್ಮಾಡು ಶಾಲೆಗೆ ತೆರಳುತ್ತಿಲ್ಲ. ಬಾಳೆಲೆ, ಪೆÇನ್ನಪ್ಪಸಂತೆ ಇತ್ಯಾದಿ ಕಡೆ ಓದುತ್ತಿರುವದೂ ಇಲ್ಲಿನ ಕನ್ನಡ ಶಾಲೆಯ ದಾಖಲಾತಿ ಕೊರತೆಗೆ ಕಾರಣವಾಗಿದೆ. ಸಾರ್ವಜನಿಕರು, ಪೆÇೀಷಕರು, ಇತರೆ ವರ್ಗದ ಪೆÇೀಷಕರು, ಶಾಲಾಭಿವೃದ್ಧಿ ಸಮಿತಿ, ಕ್ಲಸ್ಟರ್ ಅಧಿಕಾರಿಗಳು, ಶಿಕ್ಷಕರು ಉತ್ತಮ ಪ್ರಯತ್ನ ಪಟ್ಟಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚಿನ ಮಕ್ಕಳನ್ನು ಇಲ್ಲಿ ದಾಖಲಾತಿ ಮಾಡಿಕೊಳ್ಳಲು ಅವಕಾಶವಿದೆ. ಇಲ್ಲವೇ ಮುಂದೆ ‘ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ’ ನಾಪತ್ತೆಯಾದರೂ ಆದೀತು. ತುರ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದಲ್ಲಿ ಒಂದಷ್ಟು ಪುನಶ್ಚೇತನ ಸಾಧ್ಯವಿದೆ. ಇಲ್ಲವೇ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆ ಗೊಂಡು ವಾರ್ಷಿಕ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರಭ್ಯಾಸ ಮಾಡಿದ ಶಾಲೇ ನೇಪಥ್ಯಕ್ಕೆ ಸರಿದರೆ ಆಶ್ಚರ್ಯವಿಲ್ಲ.

- ಟಿ.ಎಲ್. ಶ್ರೀನಿವಾಸ್