ವೀರಾಜಪೇಟೆ, ಡಿ. 23: ಪರಿಶಿಷ್ಟ ಜಾತಿ ಪಂಗಡಗಳಿಗೆ ಸರಕಾರದಿಂದ ದೊರೆಯುವ ಮೂಲಭೂತ ಸೌಲಭ್ಯ ಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಹಾಡಿಯ ನಿವಾಸಿಗಳು ದೌರ್ಜನ್ಯ ಹಾಗೂ ಶೋಷಣೆ ಗೊಳಗಾದಾಗ ದೂರು ನೀಡಿ ಪೊಲೀಸ್ ಇಲಾಖೆಯಿಂದ ಸಹಾಯ ಪಡೆಯಬಹುದು. ಇಲಾಖೆಯು ಹಾಡಿಯ ನಿವಾಸಿಗಳಿಗೆ ಎಲ್ಲ ಹಂತದಲ್ಲು ರಕ್ಷಣೆ ನೀಡಲಿದೆ ಎಂದು ವೀರಾಜಪೇಟೆ ವಿಭಾಗದ ಡಿ.ವೈ.ಎಸ್.ಪಿ. ನಾಗಪ್ಪ ಹೇಳಿದರು.
ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಹಿಂದುಳಿದ ವರ್ಗಗಳಿಗೆ ಸರಕಾರದಿಂದ ದೊರೆಯುವ ಮೂಲಭೂತ ಸೌಲಭ್ಯಗಳ ಕುರಿತು ಹಾಡಿಯ ನಿವಾಸಿಗಳಿಗೆ ಅರಿವು ಮೂಡಿಸಲು ದಲಿತ ಸಂಘರ್ಷ ಸಮಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನುದ್ದೇಶಿಸಿ ಗೋಣಿಕೊಪ್ಪ ವಿಭಾಗದ ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್, ಪೊನ್ನಂಪೇಟೆ ಸಬ್ ಇನ್ಸ್‍ಪೆಕ್ಟರ್ ಮಹೇಶ್ ಮಾತನಾಡಿದರು. ಡಿ.ಎಸ್.ಎಸ್.ನ ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ ಮಾತನಾಡಿ, ಹಾಡಿಗಳ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಪ್ರಯತ್ನ ಮಾಡಬೇಕು. ಕೊಡಗಿನಲ್ಲಿ ವಾಸಿಸುವ ಹಾಡಿಗಳ ನಿವಾಸಿಗಳಿಗೆ ಸರಕಾರದ ಪ್ರತ್ಯೇಕ ಸೌಲಭ್ಯಗಳ ಕುರಿತು ಇನ್ನು ಅರಿವು ಇಲ್ಲ ಎಂದರು. ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ, ಸರಕಾರದಿಂದ ಹಾಡಿಗಳ ನಿವಾಸಿಗಳಿಗೆ ದೊರೆಯುವ ಮೂಲಭೂತ ಸೌಲಭ್ಯಗಳ ಸಂಬಂಧ ಸಂಘಟನೆಯೊಂದಿಗೆ ಆಗಿಂದಾಗ್ಗೆ ಅಧಿಕಾರಿಗಳು ಕೈ ಜೋಡಿಸಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಆಯೋಜಿಸಬೇಕು ಎಂದು ಹೇಳಿದರು.
ಸರಕಾರದ ಸೌಲಭ್ಯಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಬಾಳೆಲೆಯ ಬೆಂಡೆಕೊತ್ತಿ ಹಾಗೂ ಚಟ್ಟಕೆರೆ ಹಾಡಿಯ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದವು.