ಮಡಿಕೇರಿ, ಡಿ. 23: ವಿಶಿಷ್ಟ ಪರಂಪರೆಯನ್ನು ಹೊಂದಿರುವ ಕೊಡವರ ಬದುಕನ್ನು ಪರಿಚಯಿಸುವ ದೂರದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಶೇಷ ಅನುದಾನದೊಂದಿಗೆ ತಲೆಯೆತ್ತ ಬೇಕಿದ್ದ ಕೊಡವ ಹೆರಿಟೇಜ್ ಕಟ್ಟಡಕ್ಕೆ ಆರಂಭದಿಂದಲೇ ವಿಘ್ನ ಕಾಡತೊಡಗಿದೆ. ಅಪೂರ್ವ ಶೈಲಿಯಲ್ಲಿ ತಲೆಯೆತ್ತಬೇಕಿದ್ದ ಈ ಪ್ರತಿಷ್ಠಿತ ಸೌಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅರ್ಧದಲ್ಲೇ ನಿಂತಿದೆ. ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ದುರುಳರು ಅರ್ಧಂಬರ್ಧದ ಕಟ್ಟಡವನ್ನು ಕೆಡವಿ ಹಾಕಿ ಇಟ್ಟಿಗೆ - ಮರಮುಟ್ಟುಗಳನ್ನು ಸಾಗಿಸುತ್ತಿದ್ದಾರೆ.ಮಡಿಕೇರಿಯ ಗಾಲ್ಫ್ ಮೈದಾನದ ಅಂಚಿನ ಗುಡ್ಡದಲ್ಲಿ ದಶಕದ ಹಿಂದೆ, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ರತಿವಿನಯ್‍ಝಾ ಅವರ ಪ್ರಯತ್ನ ಹಾಗೂ ಕೆಲವರ ವಿಶೇಷ ಆಸಕ್ತಿಯ ಮೇರೆಗೆ ಈ ಕೊಡವ ಪಾರಂಪರಿಕ ತಾಣ ನಿರ್ಮಾಣ ಆರಂಭವಾಯಿತು.ಆ ಬೆನ್ನಲ್ಲೇ ಕೇಂದ್ರ ಸರಕಾರದಿಂದ ಪ್ರಾರಂಭಿಕ ಹಣ ರೂ. 2.68 ಕೋಟಿಯಷ್ಟು ಬಿಡುಗಡೆ ಕೂಡ ಆಗಿತ್ತು. ಅಲ್ಲದೆ, ಈ ಕೊಡವ ಹೆರಿಟೇಜ್‍ಗೆ ಸಂಪರ್ಕ ರಸ್ತೆ ಕಲ್ಪಿಸಲು ಪ್ರತ್ಯೇಕ ರೂ. 2 ಕೋಟಿ ಸಹಿತ ಒಟ್ಟು ರೂ. 4.68 ಕೋಟಿ ಹಣ ಬಿಡುಗಡೆ ಗೊಂಡಿತು. ಈ ಮೊತ್ತದಿಂದ ಕಾಂಕ್ರಿಟ್ ರಸ್ತೆಯೊಂದಿಗೆ ಚರಂಡಿ ಇತ್ಯಾದಿ ನಿರ್ಮಾಣ ಕಾಮಗಾರಿ ಯನ್ನು ಲೋಕೋಪಯೋಗಿ ಇಲಾಖೆಯು ಟೆಂಡರ್ ಪ್ರಕ್ರಿಯೆ ಮೂಲಕ ಕುಶಾಲನಗರದ ಗುತ್ತಿಗೆದಾರರ ಪುರುಷೋತ್ತಮ ರೈ ಎಂಬವರಿಗೆ ನೀಡಿತ್ತು.
ಇನ್ನು ಕೊಡವ ಪಾರಂಪರಿಕ ತಾಣ ಕಟ್ಟಡದ ಕಾಮಗಾರಿಯನ್ನು ಮೈಸೂರು ಮೂಲದವರೆನ್ನಲಾದ ಹೇಮಶಂಕರ್ ಎಂಬ ವ್ಯಕ್ತಿಗೆ ಲೋಕೋಪಯೋಗಿ ಇಲಾಖೆ ವಹಿಸಿಕೊಟ್ಟಿತು. ನಾಲ್ಕು ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣದ ಕಾಮಗಾರಿಯೂ ಭರದಿಂದ ಸಾಗಿದಂತೆ ಭಾಸವಾಗುತ್ತಿತ್ತು. ದಿನಗಳು ಉರುಳಿದಂತೆ ಕಾಮಗಾರಿ ಮಂದಗತಿಯಲ್ಲಿ ಗೋಚರಿಸಿತು. ನಂತರದ ದಿನಗಳಲ್ಲಿ ಕಾಮಗಾರಿ ನಿಂತು ಅದು ಪುಂಡಪೋಕರಿಗಳ ಅಡ್ಡ್ಡೆಯಾಗಿ ಪರಿವರ್ತನೆಗೊಂಡಿತು. ಕಾಡು - ಕುರುಚಲುಗಳು ಬೆಳೆದು ಕೊಡವ ಪರಂಪರೆಯನ್ನೇ ಅಣಕಿಸುವಂತೆ ಸಂಬಂಧಿಸಿದವರು ನಿರ್ಲಕ್ಷಿಸಿದರು. ಜನಪ್ರತಿನಿಧಿಗಳಿಗೆ ಇದೊಂದು ಯೋಜನೆ ಇದೆ ಎಂಬದೇ ಗೊತ್ತಾಗಲಿಲ್ಲ; ಅಧಿಕಾರಿ ಗಳು ಅವರ ಪಾಲಿನ ಲಾಭ ಪಡೆದು ಯೋಜನೆ ಮುಂದುವರಿಸಲಿಲ್ಲ.
ಮುಖ್ಯಮಂತ್ರಿ ಎದುರು ಪ್ರಸ್ತಾಪ: ಕಳೆದ ಜುಲೈನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮನ ವೇಳೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕೊಡವ ಹೆರಿಟೇಜ್ ಕಾಮಗಾರಿ ಸಮರ್ಪಕ ವಾಗಿ ನಡೆಯುತ್ತಿಲ್ಲವೆಂದೂ, ಹೀಗಿದ್ದೂ ಲೋಕೋಪಯೋಗಿ ಅಧಿಕಾರಿಗಳು ಗುತ್ತಿಗೆದಾರರನಿಗೆ ಕೋಟಿಗಟ್ಟಲೆ ರೂ. ಬಿಡುಗಡೆ ಗೊಳಿಸಿದ್ದಾಗಿ ಆಕ್ಷೇಪಿಸಿದರು.
ಸಚಿವರಿಂದ ತಡೆ: ಪ್ರವಾಸೋದ್ಯಮ ಇಲಾಖೆಯ ಅಧೀನಕ್ಕೆ ಬರುವ ಈ ಪಾರಂಪರಿಕ ತಾಣ ಕಟ್ಟಡದ ಕಾಮ ಗಾರಿಯಲ್ಲಿ ಹಣ ದುರುಪಯೋಗದ ವಾಸನೆ ಬೆನ್ನಲ್ಲೇ, ರಾಜ್ಯ ಪ್ರವಾಸೋದ್ಯಮ ಖಾತೆ ಹೊಂದಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕೂಡ ಅಧಿಕಾರಿಗಳ ವಿರುದ್ಧ ಮಾತಿನ ಚಾಟಿ ಬೀಸಿದ್ದರು. ಪರಿಣಾಮ ವೆಂಬಂತೆ, ಶೇ. 50ಕ್ಕೂ ಅಧಿಕ ಹಣ ಪಡೆದಿರುವ ಗುತ್ತಿಗೆದಾರ ಹೇಮಶಂಕರ್ ಪಡೆದಿದ್ದ ಟೆಂಡರ್ ರದ್ದುಗೊಳಿಸಲು ಆದೇಶಿಸ ಲಾಯಿತು.
(ಮೊದಲ ಪುಟದಿಂದ)
ಮರು ಟೆಂಡರ್ : ಸರಕಾರದ ನಿರ್ದೇಶನದಂತೆ ಈಗಾಗಲೇ ರಸ್ತೆ ಕಾಮಗಾರಿಗೆ ಪ್ರತ್ಯೇಕ ಗುತ್ತಿಗೆದಾರನಿಗೆ ರೂ. 2 ಕೋಟಿ ಹಾಗೂ ಕಟ್ಟಡ ಕಾಮಗಾರಿಗೆ ಸುಮಾರು 1.60 ಕೋಟಿ ಪಾವತಿಸಿರುವ ಲೋಕೋಪ ಯೋಗಿ ಇಲಾಖಾಧಿಕಾರಿಗಳು, ಅಪೂರ್ಣಗೊಂಡಿರುವ ಕಟ್ಟಡ ಕಾಮಗಾರಿಗೆ ಹೆಚ್ಚುವರಿ ರೂ. 1.40 ಕೋಟಿ ಕ್ರಿಯಾಯೋಜನೆಯೊಂದಿಗೆ ಪ್ರತ್ಯೇಕ ಟೆಂಡರ್ ಪ್ರಕ್ರಿಯೆಗೆ ಮುಂದಾಗಿದ್ದಾರೆ.
ಒಟ್ಟು ರೂ. 5 ಕೋಟಿ : ಹೀಗೆ ಕೊಡವ ಹೆರಿಟೇಜ್ ಕಟ್ಟಡಕ್ಕೆ ಒಟ್ಟಾರೆ ರೂ. 3 ಕೋಟಿ ಹಾಗೂ ರಸ್ತೆ ಬಾಬ್ತು ರೂ. 2 ಕೋಟಿ ಸಹಿತ; ಇದೀಗ ರೂ. 5 ಕೋಟಿಯಷ್ಟು ವೆಚ್ಚದಲ್ಲಿ ಪಾರಂಪರಿಕ ತಾಣದ ಕಾಮಗಾರಿ ಪೂರೈಸಲು ಇಲಾಖೆಗಳಿಂದ ತಯಾರಿ ನಡೆದಿದೆ ಎಂದು ಸಂಬಂಧಿಸಿದ ಮೂಲಗಳಿಂದ ಮಾಹಿತಿ ಲಭಿಸಿದೆ.
ಒಡೆದಿರುವ ದುರುಳರು: ಈ ನಡುವೆ ಈಗಾಗಲೇ ಕಟ್ಟಡದಲ್ಲಿ ತಲೆಯೆತ್ತಿ ನಿಂತಿರುವ ಮಂಗಳೂರು ಇಟ್ಟಿಗೆಯ ಗೋಡಗಳನ್ನು ಯಾರೋ ದುರುಳರು ಕೆಡವಿ ಹಾಕಿ, ಅಲ್ಲಿಂದ ಬೇರೆಡೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಹಿಂದೆ ಇದ್ದ ಕಿಟಕಿ ಸರಕು ಸರಂಜಾಮುಗಳು ಕಳ್ಳರ ಪಾಲಾಗಿವೆ. ನಿರ್ಮಾಣಗೊಂಡಿರುವ ಕಟ್ಟಡದ ಗೋಡೆಗಳು, ಸಾಲು ಸಾಲು ಮೆಟ್ಟಿಲುಗಳು, ಆಕರ್ಷಕ ರೂಪ ಪಡೆಯಬೇಕಿದ್ದ ಕಂಬಗಳನ್ನು ಕೂಡ ದುರುಳರು ನಾಶಗೊಳಿಸಿರುವದು ಕಂಡು ಬರುತ್ತಿದೆ. ಇನ್ನು ಅಲ್ಲಲ್ಲಿ ರಾಶಿ ರಾಶಿ ಗುಡ್ಡ್ಡೆ ಹಾಕಿರುವ ಇಟ್ಟಿಗೆಗಳ ಸಹಿತ ಒಡೆದಿರುವ ಗೋಡೆಗಳ ಅವಶೇಷಗಳು ಅಲ್ಲಲ್ಲಿ ಬಿದ್ದಿವೆ.
ಮಾತೆತ್ತಿದರೆ ಆ ಯೋಜನೆ ಈ ಯೋಜನೆ ಎಂದು ಬೊಗಳೆ ಬಿಡುವ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆಯೇ? ಇವರನ್ನು ಪ್ರಶ್ನಿಸುವವರು ಯಾರೂ ಇಲ್ಲವೇ.?
ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖಾಧಿಕಾರಿಗಳು, ಕೊಡವ ಪಾರಂಪರಿಕ ತಾಣ ತಲೆಯೆತ್ತುವ ಮುನ್ನ ಕೆಡವಿ ಹಾಕುತ್ತಿರುವ ದುರುಳರ ವಿರುದ್ಧ ಕ್ರಮಕೈಗೊಂಡು, ಸರಕಾರ ಬೊಕ್ಕಸಕ್ಕೆ ಇನ್ನಷ್ಟು ನಷ್ಟವಾಗದಂತೆ ನಿಗಾವಹಿಸಬೇಕಿದೆ. ಅಲ್ಲದೆ ಜನತೆಯ ತೆರಿಗೆ ಹಣ ಈ ರೀತಿ ವ್ಯರ್ಥವಾಗದಂತೆ, ಮತ್ತು ನೈಜ ಉದ್ದೇಶ ಸಾಕಾರಗೊಳ್ಳುವತ್ತ ಈ ಅಪೂರ್ಣ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗಬೇಕಿದೆ. ತಪ್ಪಿದಲ್ಲಿ ಕೊಡವ ಪಾರಂಪರಿಕ ತಾಣದ ಕನಸಿನ ಸೌಧ ಕೊಡಗಿನ ಇತರ ಸರಕಾರಿ ಯೋಜನೆಗಳಂತೆ ಕನಸಾಗಿಯೇ ಉಳಿದು ಬಿಡಬಹುದು.
ಪ್ರವಾಸೋದ್ಯಮ ಇಲಾಖೆ ಇದ್ದೂ ಸತ್ತಂತಿರುವಾಗ ಯಾವದೇ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ, ಕೆಲಸ ಮಾಡಲು ಆಯೋಗ್ಯವಾದ ಅಧಿಕಾರಿಗಳು ಕೊಡಗು ಬಿಟ್ಟು ತೆರಳುವದು ಒಳಿತು.
-ಶ್ರೀಸುತ