ಮಡಿಕೇರಿ, ಡಿ. 23: ಡಿಸೆಂಬರ್ 15 ರಂದು ಪಿರಿಯಾಪಟ್ಟಣದಲ್ಲಿ ವಾಹನ ಡಿಕ್ಕಿಯಾಗಿ ಅನುಮಾನಾಸ್ಪ ದವಾಗಿ ಸಾವಿಗೀಡಾಗಿದ್ದ ಜಿಲ್ಲೆಯ ಪೊನ್ನಂಪೇಟೆಯ ಯುವಕ ವಿಷ್ಣುವಿನ ಸಾವು ಅಪಘಾತದಿಂದ ಸಂಭವಿಸಿ ದ್ದಲ್ಲ... ಇದೊಂದು ಪೂರ್ವನಿ ಯೋಜಿತ ಕೊಲೆ ಎಂಬ ಅಂಶ ಬಯಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರಿನಂತೆ ಬಿರುಸಿನ ತನಿಖೆ ನಡೆಸಿದ ಪಿರಿಯಾಪಟ್ಟಣ ಪೊಲೀಸರು ಘಟನೆಯನ್ನು ಬೆಳಕಿಗೆ ತಂದಿದ್ದು, ಕೊಲೆಗೈದಿರುವ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನವೀನ, ಅರುಣ್ ಕುಮಾರ್ ಹಾಗೂ ಕೋಲಾರ ಜಿಲ್ಲೆಯ ಶ್ರೀಹರಿ ಆಲಿಯಾಸ್ ವೆಂಕಟೇಶ್ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಈ ಕೃತ್ಯದಲ್ಲಿ ಇನ್ನೂ ಹಲವರಿದ್ದು ಇವರ ಬಂಧನಕ್ಕೆ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ.

ಘಟನೆಯ ಹಿನ್ನೆಲೆ

ಪೊನ್ನಂಪೇಟೆ ಮತ್ತೂರಿನ ವಿಷ್ಣು ಹಾಗೂ ಆತನ ಸ್ನೇಹಿತ ಲೋಕೇಶ್ ಎಂಬವರು ತಾ. 14 ರಂದು ಸಂಜೆ ತಮ್ಮ ಬೈಕ್‍ನಲ್ಲಿ ಮನೆಯಿಂದ ತೆರಳಿದ್ದರು. ಅದೇ ದಿನ ರಾತ್ರಿ 8.30ಕ್ಕೆ ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯ ಅಳ್ಳೂರಿನಿಂದ ದೂರವಾಣಿ ಕರೆ ಯೊಂದು ವಿಷ್ಣುವಿನ ಸಂಬಂಧಿಕರಿಗೆ ಬಂದಿದ್ದು, ಅಲ್ಲಿ ಇವರ ಬೈಕ್ ಅವಘಡಕ್ಕೀಡಾಗಿರುವ ಮಾಹಿತಿ ಲಭಿಸಿದೆ. ವಿಷ್ಣುವಿನ ಸಹೋದರ ವಿಘ್ನೇಶ್ ಹಾಗೂ ಇತರರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಬೈಕ್ ಇವರಿಗೆ ಸೇರಿರುವದಾಗಿದ್ದು ಖಚಿತವಾಗಿತ್ತು. ಗಾಯಗೊಂಡಿದ್ದ ಲೋಕೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟಿದ್ದು, ವಿಷ್ಣು ಪತ್ತೆಯಾಗಿರಲಿಲ್ಲ. ರಾತ್ರಿ ಸಾಕಷ್ಟು ಹುಡುಕಾಟ ನಡೆಸಿದರೂ ಮಾಹಿತಿ ಸಿಕ್ಕಿರಲಿಲ್ಲ.

ಈ ಬಗ್ಗೆ ವಿಷ್ಣುವಿನ ಸಹೋದರ ವಿಘ್ನೇಶ್ ನಾಪತ್ತೆ ದೂರು ನೀಡಿದ್ದರು. ಮರುದಿನ (ತಾ. 15) ಬೆಳಿಗ್ಗೆ 7 ಗಂಟೆಗೆ ಅಲ್ಲಿನ ಕಳ್ಳಬೆಟ್ಟ ಜಂಕ್ಷನ್‍ನಲ್ಲಿ ಮೃತದೇಹವೊಂದು ಕಂಡುಬಂದಿರುವ ಮಾಹಿತಿ ಬಂದಿದ್ದು, ಪರಿಶೀಲಿಸಿದಾಗ ಇದು ವಿಷ್ಣುವಿನ ದೇಹ ಎಂಬದು ಖಚಿತವಾಗಿತ್ತು. ಈ ಕುರಿತು ಮೃತ ವ್ಯಕ್ತಿಯ ಸಹೋದರ ವಿಘ್ನೇಶ್ ಕೆಲವರ ಬಗ್ಗೆ ಸಂಶಯ ವ್ಯಕ್ತಪಡಿಸಿ ಇದು ಕೊಲೆ ಎಂದು ದೂರು ನೀಡಿದ್ದರು.

ಸಂಶಯವೇನಿತ್ತು...?

ಮೃತ ವಿಷ್ಣು ಈ ಹಿಂದೆ ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿಕೊಂಡಿದ್ದ. ಈ ಸಂದರ್ಭ ಅಲ್ಲಿನ ಗ್ರಾಮಾಂತರ ಜಿಲ್ಲೆಯ ದೊಡ್ಡೇನಹಳ್ಳಿಯ ನವೀನ್ ಕುಮಾರ್ ಸ್ನೇಹಿತನಾಗಿದ್ದು, ಆತನೊಂದಿಗೆ ಹಣದ ವಿಚಾರದಲ್ಲಿ ವೈಮನಸ್ಸು ಇತ್ತೆನ್ನಲಾಗಿದೆ. ಇದರಂತೆ ಇಬ್ಬರಿಗೂ ಗಲಾಟೆಯಾಗಿತ್ತು. ತಾ. 14 ರಂದು ವಿಷ್ಣು ಪೊನ್ನಂಪೇಟೆಯ ತನ್ನ ಕೋಳಿ ಫಾರಂಗೆ ಬೇಕಾದ ಇಟ್ಟಿಗೆ ತರಲೆಂದು ಸ್ನೇಹಿತ ಲೋಕೇಶ್‍ನೊಂದಿಗೆ ತೆರಳಿದ್ದು, ನಂತರದಲ್ಲಿ ಈ ಕೃತ್ಯ ನಡೆದಿದೆ.

ಈ ವಿಚಾರವನ್ನು ಉಲ್ಲೇಖಿಸಿ ವಿಘ್ನೇಶ್ ದೂರು ನೀಡಿದ್ದು, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಸ್ನೇಹಾ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಬಿ.ಆರ್. ಪ್ರದೀಪ್, ಉಪ ನಿರೀಕ್ಷಕ ಗಣೇಶ್ ಅವರನ್ನು ಒಳಗೊಂಡ

(ಮೊದಲ ಪುಟದಿಂದ)ತಂಡವನ್ನು ತನಿಖೆಗೆ ನಿಯೋಜಿಸಲಾಗಿತ್ತು.

ಸಂಶಯವಿದ್ದ ವ್ಯಕ್ತಿ ನವೀನ್ ಸೇರಿದಂತೆ ಅರುಣ್ ಕುಮಾರ್ ಹಾಗೂ ಶ್ರೀಹರಿಯನ್ನು ತಾ. 20 ರಂದು ರಾತ್ರಿ ಧರ್ಮಸ್ಥಳದಲ್ಲಿ ವಶಕ್ಕೆ ಪಡೆದ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಕೃತ್ಯ ಬಯಲಿಗೆ

ಪೊಲೀಸರ ತೀವ್ರ ವಿಚಾರಣೆ ಸಂದರ್ಭ ಆರೋಪಿ ನವೀನ್ ಸೇರಿದಂತೆ ಇತರರು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ವಿಷ್ಣು ತನಗೆ ನೀಡಬೇಕಾದ ಹಣ ನೀಡದ ಕಾರಣ ಆತನ ಮೇಲೆ ವೈಷಮ್ಯವಿತ್ತು. ಇದರಂತೆ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಸ್ನೇಹಿತರೊಂದಿಗೆ ಗೋಣಿಕೊಪ್ಪಲಿಗೆ ಆಗಮಿಸಿ ಹೋಂ ಸ್ಟೇಯೊಂದರಲ್ಲಿ ಉಳಿದುಕೊಂಡು ಸಂಚು ರೂಪಿಸಲಾಗಿತ್ತು. ಇದರಂತೆ ವಿಷ್ಣು ಹಾಗೂ ಆತನ ಸ್ನೇಹಿತ ತಾ. 14 ರಂದು ಹುಣಸೂರಿನತ್ತ ತೆರಳುತ್ತಿದ್ದಾಗ ಅವರನ್ನು ತಮ್ಮ ಟವೇರಾ ಹಾಗೂ ಇನೋವಾ ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಲಾಗಿತ್ತು. ಬಳಿಕ ಟವೇರಾ ಕಾರಿನಲ್ಲಿ ಬೈಕಿಗೆ ಹಿಂಬದಿಯಿಂದ ಡಿಕ್ಕಿಪಡಿಸಿದಾಗ ಇಬ್ಬರೂ ಕೆಳಗೆ ಬಿದ್ದಿದ್ದರು. ನಂತರ ವಿಷ್ಣುವನ್ನು ಕಾರಿನಲ್ಲಿ ಹಾಕಿಕೊಂಡು ಸಾಲ ವಸೂಲಾತಿಗೆ ಬೆಂಗಳೂರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ನವೀನ ಹಾಗೂ ಸ್ನೇಹಿತರು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬೆಂಗಳೂರಿನ ಗೊರಗುಂಟೆ ಪಾಳ್ಯ ತಲಪಿದಾಗ ವಿಷ್ಣು ಸತ್ತು ಹೋಗಿರುವದು ಅರಿವಾಗಿದ್ದು, ಮತ್ತೆ ಶವವನ್ನು ಅದೇ ವಾಹನದಲ್ಲಿ ವಾಪಾಸ್ಸು ತಂದು ಕಲ್ಲ್ಲುಬೆಟ್ಟ ಜಂಕ್ಷನ್ ಬಳಿ ಹಾಕಿ ಹೋಗಿದ್ದಾಗಿ ಬಂಧಿತರು ಬಾಯಿಬಿಟ್ಟಿದ್ದಾರೆ.

ಇದೀಗ ಈ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಆರೇಳು ಮಂದಿ ಭಾಗಿಗಳಾಗಿದ್ದು, ಇವರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಕೃತ್ಯಕ್ಕೆ ಬಳಸಲಾಗಿದ್ದ ಟವೇರಾ ಹಾಗೂ ಇನೋವಾ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ವೃತ್ತ ನಿರೀಕ್ಷಕ ಪ್ರದೀಪ್, ಎಸ್.ಐ. ಗಣೇಶ್ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.