ಮಡಿಕೇರಿ, ಡಿ. 23: ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬಸವನಹಳ್ಳಿ ಸಮೀಪ ಮಾದಾಪಟ್ಟಣ ನಿವಾಸಿಗಳಾದ ಇಬ್ಬರು ಯುವತಿಯರು ದ್ವಿಚಕ್ರ ವಾಹನದಲ್ಲಿ (ಕೆಎ-12 ಎಸ್-3481) ತೆರಳುತ್ತಿದ್ದಾಗ, ಕಾರೊಂದು (ಕೆಎ-53 ಸಿ-2217) ಡಿಕ್ಕಿ ಹೊಡೆದಿರುವ ಪರಿಣಾಮ ತೀವ್ರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಹಗಲು ಮಾದಾಪಟ್ಟಣ ರಸ್ತೆ ತಿರುವಿನಲ್ಲಿ ಬೆಂಗಳೂರಿನ ಕಾರು ಚಾಲಕ ರಘು ಡಿಕ್ಕಿಪಡಿಸಿದ್ದು, ದಿವ್ಯ (18) ಹಾಗೂ ದಿವ್ಯ (19) ಎಂಬಿಬ್ಬರು ಏಕ ಹೆಸರಿನ ಯುವತಿಯರ ತಲೆ, ಕೈಕಾಲುಗಳಿಗೆ ಪೆಟ್ಟಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸಂತೋಷ್ ಎಂಬವರು ಈ ಸಂಬಂಧ ದೂರು ನೀಡಿದ್ದಾರೆ.