ಗೋಣಿಕೊಪ್ಪ ವರದಿ, ಡಿ. 23: ಉತ್ತಮ ದೇಶ ಕಟ್ಟಲು ಭಾವನೆಗಳ ಅವಶ್ಯಕತೆ ಹೆಚ್ಚಿರುವದರಿಂದ ಯುವ ಸಮೂಹ ಭಾವನಾತ್ಮಕವಾಗಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿರುವ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾವನೆಗಳ ಮೂಲಕ ಸೇವೆ ಸಲ್ಲಿಸುವ ಉದ್ದೇಶದಿಂದ ಶಿಬಿರಗಳನ್ನು ಆಯೋಜಿಸಿ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದನ್ನು ಅರಿತುಕೊಂಡು ಯುವ ಸಮೂಹ ಪ್ರತೀ ಕೆಲಸದಲ್ಲೂ ಭಾವನೆಗಳಿಗೆ ಒತ್ತು ನೀಡಬೇಕು. ಹೆಚ್ಚು ಶ್ರಮ ವಹಿಸಿ ತಮ್ಮದೇ ಆದ ಚಿಂತನೆ ಮೂಲಕ ದೇಶಕ್ಕೆ ವಿಶೇಷ ಕೊಡುಗೆ ಕೊಡಲು ಸಾಧ್ಯ ಎಂದರು.

ಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಪೊನ್ನಪ್ಪ, ದೇಶದ ಅಭಿವೃದ್ಧಿಗೆ ಯುವ ಜನರಿಂದ ಹೆಚ್ಚಿನ ನಿರೀಕ್ಷೆ ಇದೆ. ಅದನ್ನು ಸಾಕಾರಗೊಳಿಸಲು ಸದಾ ಪ್ರಯತ್ನ ನಡೆಸಬೇಕಿದೆ ಎಂದರು.

ಕಾವೇರಿ ವಿದ್ಯಾಸಂಸ್ಥೆ ನಿರ್ದೇಶಕ ಪ್ರೊ. ಇಟ್ಟೀರ ಬಿದ್ದಪ್ಪ ಮಾತನಾಡಿ, ಸೇವಾ ಮನೋಭಾವನೆ ಮೂಲಕ ಸಮಾಜಕ್ಕೆ ತನ್ನದೇ ಕೊಡಗೆ ನೀಡಲು ಸಹಕಾರಿಯಾಗಲಿದೆ ಎಂದರು.

ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಸೇವಾ ಮನೋಭಾವನೆ ಹೆಚ್ಚಾದಷ್ಟು ಸಮಾಜದಲ್ಲಿ ಕಠಿಣ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬ ಮಾನಸಿಕ ಸ್ಥೈರ್ಯವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತಾ, ಪ್ರೊ. ಕಮಲಾಕ್ಷಿ, ಗ್ರಾಮದ ಪ್ರಮುಖರುಗಳಾದ ಮೂಕಳಮಾಡ ಮೊಣ್ಣಪ್ಪ, ಬೊಳ್ಳಿಯಂಗಡ ದಾದು ಪೂವಯ್ಯ, ಚೇಂದೀರ ಚಿಟ್ಯಪ್ಪ, ಕಾಯಪಂಡ ಸಾವಿತ್ರಿ, ಮಲ್ಲಂಡ ಸುಬ್ಬಯ್ಯ, ಕೇಚಟ್ಟೀರ ಗಣಪತಿ, ಮಂಡೇಚಂಡ ಪೂಣಚ್ಚ, ಬೈರಂಡ ಮೀಟಿ ಮುತ್ತಪ್ಪ, ಪಿಡಿಒ ಹೆಚ್. ಸುರೇಶ್, ಮುಖ್ಯ ಶಿಕ್ಷಕಿ ಇ.ಎಸ್. ಸುಜಾತ ಉಪಸ್ಥಿತರಿದ್ದರು. ಯೋಜನಾಧಿಕಾರಿ ವನೀತ್‍ಕುಮಾರ್ ಸ್ವಾಗತಿಸಿದರು. ಮಚ್ಚಮಡ ರೀತಾ ವಂದಿಸಿದರು.