ಹೆಬ್ಬಾಲೆ, ಡಿ. 23: ವನ್ಯಜೀವಿಗಳು ನಮ್ಮ ಪ್ರದೇಶಕ್ಕೆ ಬರುತ್ತಿಲ್ಲ, ನಾವುಗಳೇ ಅವುಗಳ ಆವಾಸ ಪ್ರದೇಶವನ್ನು ಆಕ್ರಮಿಸಿ ಕೊಳ್ಳುತ್ತಿದ್ದೇವೆ. ಇದರಿಂದ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ ಎಂದು ಬೆಂಗಳೂರಿನ ರಾಯ್ ತಾಂತ್ರಿಕ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಆತಂಕ ವ್ಯಕ್ತಪಡಿಸಿದರು.

ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೊಡ್ಡಅಳುವಾರ ವನ್ಯಜೀವಿ ಸಂಶೋಧನಾ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ಕುರಿತು ಅವರು ಮಾತನಾಡಿದರು. ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಶಿವಕುಮಾರ್ ಮಾತನಾಡಿ, ಪಶ್ಚಿಮಘಟ್ಟವು ಹಲವಾರು ವನ್ಯಜೀವಿಗಳ ತಾಣವಾಗಿದೆ. ಕಾಡುಗಳ ನಾಶ, ಹೆಚ್ಚುತ್ತಿರುವ ಜನಸಂಖ್ಯೆ, ಕಳ್ಳ ಸಾಕಾಣಿಕೆ, ಮೋಜು ಇತ್ಯಾದಿಗಳಿಂದ ಕಾಡಿನ ಜೀವವೈವಿಧ್ಯತೆ ನಾಶವಾಗುತ್ತಿದೆ.

ಪಶು ವೈದ್ಯಕೀಯ ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿ ಧ್ಯೇಯ, ರೈತ ಬಂಧು ಎಂಬ ಶೀರ್ಷಿಕೆಯಡಿ ರೈತರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ. ದಿವ್ಯಾ ಮಾನವ-ವನ್ಯಜೀವಿಗಳ ಸಂಘರ್ಷದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು.