ಕುಶಾಲನಗರ: ಕುಶಾಲನಗರ ಪೊಲೀಸ್ ಇಲಾಖಾ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಸಹಯೋಗದೊಂದಿಗೆ ನಡೆದ ಜಾಗೃತಿ ಜಾಥಾಗೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಜಗದೀಶ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಠಾಣಾಧಿಕಾರಿ ಜಗದೀಶ್, ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕೆಂದರು. ಸಮಾಜ ಘಾತುಕ ಚಟುವಟಿಕೆಗಳ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಕುಶಾಲನಗರ ಪೊಲೀಸ್ ಠಾಣೆ ಆವರಣದಿಂದ ಪ್ರಾರಂಭಗೊಂಡ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿತು. ವಿದ್ಯಾರ್ಥಿಗಳು ಘೋಷಣೆ ಕೂಗುವ ಮೂಲಕ ಜನರ ಗಮನ ಸೆಳೆದರು.
ಈ ಸಂದರ್ಭ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸ್ವಾಮಿಗೌಡ, ಸಮುದಾಯ ಪೊಲೀಸ್ ಅಧಿಕಾರಿ ಸದಾಶಿವಯ್ಯ ಪಲ್ಲೇದ್ ಮತ್ತು ಪೊಲೀಸ್ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಇದ್ದರು.ಸುಂಟಿಕೊಪ್ಪ : ಸುಂಟಿಕೊಪ್ಪ ನಗರ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಠಾಣೆಯ ಎಎಸ್‍ಐ ಪಾರ್ಥ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಊರಿಗೆ ಯಾರಾದರೂ ಅಪರಿಚಿತ ವ್ಯಕ್ತಿಗಳು ಬಂದು ತಂಗುವದು ಕಂಡುಬಂದಲ್ಲಿ ಠಾಣೆಗೆ ಮಾಹಿತಿ ನೀಡಿದರೆ ಅವರ ಚಲನವಲನದ ಬಗ್ಗೆ ಗಮನ ಹರಿಸಲಾಗುವದು. ಯಾರಾದರೂ ಮನೆ ಬಿಟ್ಟು ಬೇರೆ ಊರಿಗೆ ತೆರಳುವದಾದರೆ ರಾತ್ರಿ ಗಸ್ತು ತಿರುಗುವ ಪೊಲೀಸರು ಮನೆಯ ಕಡೆ ಒಂದು ಕಣ್ಣಿಟ್ಟಿರುತ್ತಾರೆ. ಇದರಿಂದ ಮುಂದಾಗುವ ತೊಂದರೆಯಿಂದ ಕಳ್ಳತನ ದರೋಡೆ ತಡೆಯಲು ಸಾಧ್ಯ. ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಹೇಳಿದರು. ಈ ಸಂದರ್ಭ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.