ಮಡಿಕೇರಿ, ಡಿ. 21: ಹೌದು, ಆತನೊಬ್ಬ ಸಾಮಾನ್ಯ ತೋಟ ಕೆಲಸದಾತ. ನಿತ್ಯ ಕೂಲಿ ಮಾಡಿಕೊಂಡು ತನ್ನ ಮಡದಿ-ಮಕ್ಕಳೊಂದಿಗೆ ಸಲಹುತ್ತಾ ಬಂದವ. ಹೀಗೆ ತೋಟದ ಕೆಲಸ ಮಾಡುವಾಗ ಒಮ್ಮೆ ಕೈಗೆ ಕತ್ತಿಯಿಂದ ಗಾಯವಾಯಿತು. ದೈನಂದಿನ ಕೆಲಸಕ್ಕೆ ತೊಂದರೆಯಾಯಿತು. ಆ ವೇಳೆಗೆ ಅನಾರೋಗ್ಯದಿಂದ ಮಗಳೊಬ್ಬಳು ಅಸುನೀಗಿದಳು. ಇನ್ನು ಜೊತೆಗಿರುವ ಮಡದಿಯೊಂದಿಗೆ ಮಗನ ವಿದ್ಯಾಭ್ಯಾಸ ಮುಂದುವರಿಯಬೇಕು, ಸಂಸಾರ ರಥವೂ ಸಾಗಬೇಕು.
ಈ ಚಿಂತೆಯಲ್ಲಿರುವಾಗ ಆತನಿಗೆ ನೆನಪಾಗಿದ್ದು ಮನೆಯ ಹೊರಗೆ ಮೂಲೆಯೊಂದರಲ್ಲಿ ಎಸೆದಿರುವ ಮಗನ ಮುರುಕಲು ಸೈಕಲ್. ಅದನ್ನು ತಳ್ಳಿಕೊಂಡು ಸರಿಪಡಿಸುವ ಸಲುವಾಗಿ ಪೇಟೆಗೆ ತಂದ. ಹೀಗೆ ಬರುವಾಗ ಆತನ ತಲೆಗೆ ಒಂದಿಷ್ಟು ವಿಚಾರ ಹೊಳೆಯುವದರೊಂದಿಗೆ, ಮನಸ್ಸಿನಲ್ಲಿ ಆತ್ಮ ವಿಶ್ವಾಸದ ಕಟ್ಟೆ ಒಡೆಯಿತು.
ಆ ಸೈಕಲ್‍ನ ಮಧ್ಯ ಭಾಗಕ್ಕೆ ಕಬ್ಬಿಣದ ಪಟ್ಟಿ ಅಳವಡಿಸಿ, ಇನ್ನೆರಡು ಸಣ್ಣ ಚಕ್ರಗಳನ್ನು ಜೋಡಿಸುವ ಮನಸ್ಸಾಯಿತು. ವೆಲ್ಡಿಂಗ್ ಶಾಪೊಂದಕ್ಕೆ ತೆರಳಿ ತನ್ನ ಆಲೋಚನೆಯನ್ನು ಹೇಳಿಕೊಂಡ. ಆತ ಕೂಡಲೇ ಸ್ಪಂದಿಸಿ ಈತ ಹೇಳಿದ ಹಾಗೆ ಸೈಕಲ್ ಅನ್ನು ಪರಿವರ್ತಿಸಿಕೊಟ್ಟ. ಆನಂತರದಲ್ಲಿ ನಗರಸಭೆಗೆ ತೆರಳಿದ. ತಾನು ಕಾಫಿ-ಚಹಾ ಮಾರಿಕೊಂಡು ಜೀವಿಸಲು ಅನುಮತಿ ಪತ್ರ ಕೋರಿದ.
ಆತನ ಮನದಾಳದ ಭಾವನೆಗೆ ಸ್ಪಂದಿಸಿದ ಅಲ್ಲಿನ ಸಿಬ್ಬಂದಿ ವಾರ್ಷಿಕ ರೂ. 100 ಶುಲ್ಕದೊಂದಿಗೆ ಅಧಿಕೃತ ಪರವಾನಗಿ ಕಲ್ಪಿಸಿದರು. ಒಂದಿಷ್ಟು ದಿನ ಫ್ಲಾಸ್ಕ್‍ನಲ್ಲಿ ಕಾಫಿ-ಚಹಾ-ಬಿಸ್ಕತ್ ಇತ್ಯಾದಿ ಮಾರಿ ಮಳೆಗಾಲದಲ್ಲಿ ದೈನಂದಿನ ಬದುಕು ಸವೆಸಿದ. ಮಳೆ ದೂರವಾಗಿ ಬಿಸಿಲು ಕಾವೇರತೊಡಗಿದಾಗ ಹೊಸತೊಂದು ಆಲೋಚನೆ ಚಿಗುರೊಡೆಯಿತು. ಅಲ್ಲಿ ಇಲ್ಲಿ ತೋಟಗಳಲ್ಲಿ ಸಿಕ್ಕಿದ ಹೆರಳೆಕಾಯಿ (ಕೈಹುಳಿ), ನಿಂಬೆ ಇತ್ಯಾದಿ ಸಂಗ್ರಹಿಸಿಕೊಂಡು ಬಾಟಲಿಯೊಂದರಲ್ಲಿ ಬಿಸಿನೀರಿನಲ್ಲಿ ಕರಗಿದ ಸಕ್ಕರೆ ಪಾಕ ತುಂಬಿಕೊಂಡು ಕ್ಯಾನೊಂದರಲ್ಲಿ ಶುದ್ಧ ನೀರು ಶೇಖರಿಸಿದ. ಒಂದು ಡಬ್ಬಿ ಉಪ್ಪು, ಕರಿಮೆಣಸು ಹಾಗೂ ಗಾಂಧಾರಿ ಮೆಣಸು ಪುಡಿ ಕ್ರೋಢೀಕರಿಸಿದ. ಈ ಎಲ್ಲವನ್ನು ಸಮಪಾಕದಿಂದ ಬೆರೆಸಿದಾಗ ಆತನಿಂದ ಸಿದ್ಧವಾಗಿದ್ದು ಶುದ್ಧ ಜ್ಯೂಸ್. ಗ್ಲಾಸೊಂದಕ್ಕೆ ಕೇವಲ ರೂ. 15 ಮಾತ್ರ. ಮಾತ್ರವಲ್ಲ, ಪಿತ್ತ ನೆತ್ತಿಗೇರಿದವರಿಗೆ ಕೈಹುಳಿ ರಸ ಸಿದ್ಧೌಷಧಿ ಕೂಡ!
ಇಲ್ಲಿನ ಗಾಳಿಬೀಡು ರಸ್ತೆಯ ಕೂಟುಹೊಳೆ ನಿವಾಸಿ 60ರ ಹರೆಯದ ಮಣಿ ಕಂಡುಕೊಂಡಿರುವ ಬದುಕಿನ ಕತೆಯಿದು. ದಿನವೊಂದರಲ್ಲಿ ಕನಿಷ್ಟ ರೂ. 300 ರಿಂದ 700ರ ತನಕ ಸಂಪಾದಿಸತೊಡಗಿದ್ದು, ದೈನಂದಿನ ಬದುಕಿಗೆ ತೊಂದರೆಯಿಲ್ಲವಂತೆ. ಈ ವ್ಯವಸ್ಥೆಗೆ ತಾನು ಒಟ್ಟಾಗಿ ಮಾಡಿರುವ ಖರ್ಚು ರೂ. 3 ರಿಂದ 4 ಸಾವಿರವಂತೆ. ಕೈಹುಳಿ ಪಾನಕಕ್ಕೆ ಬೇಡಿಕೆಯೂ ಇದೆಯಂತೆ. ದಿನೇ ದಿನೇ ಪರಿಚಿತರು ಹೆಚ್ಚು ಹೆಚ್ಚು ಖರೀದಿಸುತ್ತಾರಂತೆ.
ತನ್ನಲ್ಲಿರುವ ಯಾವ ವಸ್ತು ಕೂಡ ವ್ಯರ್ಥವಾಗದೆ ಬಳಕೆಯಾಗುತ್ತಿದ್ದು, ಹುಳಿ ಇತ್ಯಾದಿ ಆಯ ದಿನ ಉಳಿದರೂ ಮರುದಿನ ಖರ್ಚಾಗಲಿದೆ ಎಂದು ಮಣಿ ವಿಶ್ವಾಸದಿಂದ ನುಡಿಯುತ್ತಾರೆ. ಇಷ್ಟೆಲ್ಲವನ್ನು ಆತ ವಿವರಿಸುವಷ್ಟರಲ್ಲಿ ಆರೆಂಟು ಮಂದಿ ಅತ್ತ ಧಾವಿಸಿ ಕೈಹುಳಿ ಪಾನಕ (ಜ್ಯೂಸ್) ಕುಡಿದು, ಹಣಕೊಟ್ಟು ಪ್ರೋತ್ಸಾಹದ ಮಾತನಾಡಿ ತೆರಳಿದ ದೃಶ್ಯ ಎದುರಾಯಿತು. ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ.... ಸ್ವಾಭಿಮಾನಿಗೆ ಎಲ್ಲೆಡೆ ಬದುಕಿದೆ’ ಎಂಬದಕ್ಕೆ ತಾಜಾ ಉದಾಹರಣೆ ಕೂಟುಹೊಳೆಯ `ಮಣಿ’.
- ಶ್ರೀಸುತ