ಮಡಿಕೇರಿ ನಗರದ ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ತರಕಾರಿ, ಹಣ್ಣು-ಹಂಪಲು ವ್ಯಾಪಾರ ಮಾಡುತ್ತಿರುವದರಿಂದ ವಾಹನ ದಟ್ಟಣೆ ಎದುರಾಗುತ್ತಿದೆಯಲ್ಲದೆ, ನಗರದ ಅಂದವೂ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರುಗಳಿಗೆ ರೈತರ ಸಂತೆಯಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಎಂದು ಎಪಿಎಂಸಿ ಆಡಳಿತ ಮಂಡಳಿಯವರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ರೈತರ ಸಂತೆಗೆ ಆಗಮಿಸಿದ್ದ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಗಮನಕ್ಕೆ ತಂದರಲ್ಲದೆ, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸುವದಾಗಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಇಂದು ಸಂತೆ ಆರಂಭಗೊಂಡ ಸಂದರ್ಭ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಎಪಿಎಂಸಿ ಅಧ್ಯಕ್ಷ ಅಂಬಿಕಾರ್ಯಪ್ಪ, ಮಾಜಿ ಅಧ್ಯಕ್ಷ ಕಾಂಗಿರ ಸತೀಶ್, ಸದಸ್ಯ ಬೆಪ್ಪುರನ ಮೇದಪ್ಪ, ತಾ.ಪಂ. ಸದಸ್ಯ ಕೊಡಪಾಲು ಗಣಪತಿ, ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್, ಇನ್ನಿತರರಿದ್ದರು.