ಮಡಿಕೇರಿ, ಡಿ. 21: ರಾಜ್ಯ ಸಾರಿಗೆ ಸಂಸ್ಥೆಯ ಮಡಿಕೇರಿ ಡಿಪೋದಲ್ಲಿ ಸರಕಾರದಿಂದ ಮಂಜೂರಾಗಿರುವ 542 ಉದ್ಯೋಗಿಗಳಲ್ಲಿ ಪ್ರಸಕ್ತ ಬಹುಪಾಲು ಹುದ್ದೆಗಳು ಖಾಲಿಯಿದ್ದು, ಕೇವಲ 61 ಮಂದಿ ಮಾತ್ರ ದೈನಂದಿನ ಕರ್ತವ್ಯ ನಿರ್ವಹಿಸುತ್ತಿರುವದು ಬಹಿರಂಗಗೊಂಡಿದೆ. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆದಿದ್ದು, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ವಾಸ್ತವವನ್ನು ಹೊರಗೆಡವಿದ್ದಾರೆ.

ಸಚಿವರ ಪ್ರಕಾರ ಜಿಲ್ಲೆಯ ಮಡಿಕೇರಿ ಘಟಕದಲ್ಲಿ ಕಾರ್ಯನಿರ್ವಹಿಸಲಿರುವ 481 ಹುದ್ದೆಗಳು ಖಾಲಿಯಿದ್ದು, 192 ಚಾಲಕ ಮತ್ತು ನಿರ್ವಾಹಕ ಹುದ್ದೆಗಳು ಭರ್ತಿಗೊಂಡಿಲ್ಲ. 21 ಮಂದಿ ಕುಶಲಕರ್ಮಿಗಳು, 11 ತಾಂತ್ರಿಕ ಸಹಾಯಕರು, 6 ಸಹಾಯಕ ನಿಯಂತ್ರಕರು, ದೈನಂದಿನ ಸಾರಿಗೆ ಬಸ್‍ಗಳಿಗೆ 66 ಇತರ ಚಾಲಕರು ಹಾಗೂ 133 ನಿರ್ವಾಹಕ ಹುದ್ದೆಗಳಿಲ್ಲದೆ ಒತ್ತಡದಲ್ಲಿ ಇರುವಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮಡಿಕೇರಿ ಘಟಕದಲ್ಲಿ 2 ವರ್ಷ ಮೇಲ್ಪಟ್ಟ 11 ರಾಜಹಂಸ ಹಾಗೂ ಇತರ 53 ಬಸ್‍ಗಳು ಓಡಾಡುತ್ತಿವೆ. ಪ್ರಾಕೃತಿಕ ವಿಕೋಪ ವೇಳೆ ಮಿನಿಬಸ್‍ಗಳನ್ನು ಕಲ್ಪಿಸಿದ್ದು, ಪ್ರಸಕ್ತ 4 ಇಂತಹ ಬಸ್‍ಗಳು ಬಳಕೆಯಲ್ಲಿವೆ ಎಂದು ಸಾರಿಗೆ ಸಚಿವ ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಮೇಲ್ಮನೆ ಸದಸ್ಯರ ಮತ್ತೊಂದು ಪ್ರಶ್ನೆಗೆ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್ ಉತ್ತರಿಸಿ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಹಾರ ಉತ್ಪನ್ನಗಳ ಸಂರಕ್ಷಣೆ ಮತ್ತು ಕರಿದ ಪದಾರ್ಥಗಳ ಸೇವನೆ ಇತ್ಯಾದಿ ಸಂಬಂಧ; ಇಲಾಖೆಯಿಂದ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸರಕಾರದ ನಿಲುವು ತಿಳಿಸಿದ್ದಾರೆ.