ವೀರಾಜಪೇಟೆ, ಡಿ. 21: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಹಾಗೂ ಪ್ರಕೃತಿ ದುರಂತದಲ್ಲಿ ಬಹುತೇಕ ಮಂದಿಯ ಆಸ್ತಿ ಪಾಸ್ತಿಗಳೊಂದಿಗೆ ಜೀವ ಹಾನಿಗಳು ನಡೆದು ಹೋಗಿತ್ತು. ಇಂತಹ ಸಂದರ್ಭದಲ್ಲಿ ಜಿಲ್ಲೆ ಹಾಗೂ ರಾಜ್ಯದ ಜನತೆ ಸಕಾಲಕ್ಕೆ ಸ್ಪಂದಿಸಿದ್ದರು. ಜಿಲ್ಲಾಡಳಿತ ಕೂಡ ಪ್ರಕೃತಿ ದುರಂತದ ಜನರೊಂದಿಗೆ ಸ್ಪಂದಿಸಿತ್ತು. ಇದರಲ್ಲಿ ಮನೆ ಕಳೆದುಕೊಂಡ ಬಡ ಕುಟುಂಬಕ್ಕೆ ಸಮಾಜ ಸೇವಕರೊಬ್ಬರು ಆಸರೆಯಾಗುವ ಮೂಲಕ ಮಾದರಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ಕಾವೇರಿ ಪ್ರಹಾವೇ ಉಕ್ಕಿ ಹರಿದಿತ್ತು. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಗ್ರಾಮದ ಅಸ್ಕರ್ ಎಂಬವರ ಗುಡಿಸಲು ಮನೆಯೊಂದು ಸಂಪೂರ್ಣ ಜಲಾವೃತಗೊಂಡು ಹಾನಿಯಾಗಿತ್ತು. ಇದರಿಂದ ಕಂಗಾಲಾಗಿದ್ದ ನಿರಾಶ್ರಿತ ಬಡ ಕುಟುಂಬ ಮುಂದೇನು ಎಂಬ ಚಿಂತೆಯಲ್ಲಿದ್ದ ಸಂದರ್ಭದಲ್ಲಿ ಊರಿನ ಸಮಾಜ ಸೇವಕರೊಬ್ಬರು ಕುಟುಂಬಕ್ಕೆ ಧೈರ್ಯ ತುಂಬಿ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಕೊನೆಗೂ ನುಡಿದಂತೆ ನಡೆದ ಕಾಫಿ ಬೆಳೆಗಾರ ಐಚೆಟ್ಟಿರ ಬಂಟಿ ಮಾಚಯ್ಯ ಬೇತ್ರಿ ನಿವಾಸಿ ಅಸ್ಕರ್ ಎಂಬವರಿಗೆ ಅಂದಾಜು ರೂ. 5 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಮನೆಯನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅಸ್ಕರ್ ಪತ್ರಿಕೆಯೊಂದಿಗೆ ಮಾತನಾಡಿ, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಗುಡಿಸಲು ಮನೆಯಲ್ಲಿ ವಾಸವಾಗಿದ್ದುಕೊಂಡು ಜೀವನ ನಡೆಸುತ್ತಿದ್ದ ಸಂದರ್ಭ ಕಾವೇರಿ ನದಿ ಪ್ರವಾಹಕ್ಕೆ ಮನೆ ಕಳೆದುಕೊಂಡು ಕಂಗಾಲಗಿದ್ದೆ. ಇಂತಹ ಸನ್ನಿವೇಶದಲ್ಲಿ ಗ್ರಾಮದ ಸಮಾಜ ಸೇವಕ ಐಚೆಟ್ಟಿರ ಬಂಟಿ ಮಾಚಯ್ಯ ಅವರು ಮನೆ ಕಟ್ಟಿಕೊಟ್ಟಿದ್ದಾರೆ. ನಿರಾಶ್ರಿತರಾಗಿದ್ದ ನಮಗೆ ಆಶ್ರಯ ನೀಡಿರುವದರಿಂದ ನೆಮ್ಮದಿಯ ಜೀವನ ನಡೆಸುವಂತಾಗಿದೆ.
ಐಚೆಟ್ಟಿರ ಬಂಟಿ ಮಾಚಯ್ಯ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಅಸ್ಕರ್ ಕುಟುಂಬ ಮನೆಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭ ಸ್ನೇಹಿತರ ಸಹಕಾರದೊಂದಿಗೆ ರೂ. 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದೇನೆ. ಪ್ರವಾಹ ಸಂದರ್ಭದಲ್ಲಿ ಹರಿದುಬಂದ ಸಾಮಗ್ರಿಗಳು ಸರಿಯಾದ ನಿರಾಶ್ರಿತರಿಗೆ ತಲಪಿದೆಯಾದರೂ ಕೆಲವು ಕಡೆಗಳಲ್ಲಿ ದುರ್ಬಳಕೆ ಆಗಿದೆ. ನಾವು ನೀಡುವ ಪರಿಹಾರದಿಂದ ಒಂದು ಕುಟುಂಬವಾದರೂ ಶಾಶ್ವತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಮನೆ ನಿರ್ಮಿಸಿಕೊಡಲಾಗಿದೆ. ಪ್ರತಿಯೊಬ್ಬರು ಸಂಕಷ್ಟದಲ್ಲಿ ಸಿಲುಕಿರುವವರಿಗೆ ನೆರವಾಗಲು ಮುಂದೆ ಬರಬೇಕಾಗಿದೆ ಎಂದರು.