ಹೆಬ್ಬಾಲೆ, ಡಿ. 21 : ತಂಬಾಕು ಬೆಳೆಯಿಂದ ಮಾನವನ ಆರೋಗ್ಯ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತಂಬಾಕು ಬೆಳೆಯ ಬದಲಿಗೆ ಸೂಕ್ತ ಪರ್ಯಾಯ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಹೇಳಿದರು.

ಜಿ. ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಸೋಮವಾರಪೇಟೆ ಇವರ ಸಂಯುಕ್ತಾಶ್ರಯದಲ್ಲಿ 2018-19ನೇ ಸಾಲಿನ ರಾಜ್ಯ ವಲಯ ಯೋಜನೆಯ ತಂಬಾಕು ಬೆಳೆಗೆ ಪರ್ಯಾಯ ತೋಟಗಾರಿಕೆ ಬೆಳೆ ಹಾಗೂ ಬೆಳೆ ಪದ್ಧತಿ ಯೋಜನೆ ಕುರಿತು ಶುಕ್ರವಾರ ಶಿರಂಗಾಲ ಗ್ರಾಮದಲ್ಲಿ ಏರ್ಪಡಿಸಿದ್ದ ರೈತರಿಗೆ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಂಬಾಕು ಪರ್ಯಾಯ ಬೆಳೆ ಪದ್ಧತಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ನೀಡಲಾಗುತ್ತಿದೆ. ಬಾಳೆ (ಅಂಗಾಂಶ ಕೃಷಿ) ಪ್ರತಿ ಹೇಕ್ಟೇರ್‍ಗೆ ರೂ.50,000 ಸಾವಿರ , ಬಾಳೆ(ಕಂದು) ಪ್ರತಿ ಹೇಕ್ಟೇರ್‍ಗೆ ರೂ. 35,000 ಸಾವಿರ, ಪಪ್ಪಾಯ ಪ್ರತಿ ಹೇಕ್ಟೇರ್‍ಗೆ ರೂ. 50,000 ಸಾವಿರ , ಆನಾನಸ್ (ಅಂಗಾಂಶ) ಪ್ರತಿ ಹೇಕ್ಟೇರ್‍ಗೆ ರೂ.50,000 ಸಾವಿರ, ತೆಂಗು ಪ್ರತಿ ಹೇಕ್ಟೇರ್ ಗೆ ರೂ.6500, ಕೋಕೋ ಪ್ರತಿ ಹೇಕ್ಟೇರ್‍ಗೆ ರೂ. 20,000 ಸಾವಿರ, ಮಾವು ಪ್ರತಿ ಹೇಕ್ಟೇರ್‍ಗೆ ರೂ. 40,000 ಸಾವಿರ, ಗೇರು ಪ್ರತಿ ಹೇಕ್ಟೇರ್‍ಗೆ ರೂ. 20,000 ಸಾವಿರ, ಹೂ (ಬಿಡಿ ಹೂ) ರೂ. 16 ,000 ಸಾವಿರ ಹಾಗೂ ತರಕಾರಿ ಪ್ರತಿ ಹೇಕ್ಟೇರ್‍ಗೆ ರೂ. 22,500 ಸಾವಿರ ನೀಡುತ್ತಿದ್ದು, ಈ ಸೌಲಭ್ಯವನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

ಮಡಿಕೇರಿ ಹಾರ್ಟಿಕ್ಲಿನಿಕ್ ವಿಷಯ ತಜ್ಞ ನಾಚಪ್ಪ ಮಾತನಾಡಿ, ರೈತರಿಗೆ ತಾಳೆ ಬೆಳೆ ಸೂಕ್ತ ಬೆಳೆಯಾಗಿದೆ. ದೇಶದಲ್ಲಿ ತಾಳೆ ಬೆಳೆಗೆ ಉತ್ತಮ ಬೇಡಿಕೆ ಇದೆ.ಸರ್ಕಾರ ಕೂಡ ತಾಳೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತೋಟಗಾರಿಕಾ ಇಲಾಖೆ ತಾಂತ್ರಿಕ ಅಧಿಕಾರಿ ರಮೇಶ್ ಇಪ್ಪಿಕೊಪ್ಪ ಮಾತನಾಡಿ, ತಂಬಾಕು ಬೆಳೆಯಿಂದ ಉಂಟಾಗುತ್ತಿರುವ ದುಷ್ಪಾರಿಣಾಮ ದಿಂದ ಈ ಬೆಳೆಗೆ ಪರ್ಯಾಯ ತೋಟಗಾರಿಕಾ ಬೆಳೆಯನ್ನು ರೈತರು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಮನಾಥಪುರ ತಂಬಾಕು ಮಂಡಳಿ ಹರಾಜು ಅಧೀಕ್ಷಕ ಎಸ್.ಎಸ್.ಪಾಟೀಲ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ಆರೋಗ್ಯಕ್ಕೆ ಹಾನಿಕಾರಕವಾಗಿರುವ ಹಿನ್ನೆಲೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಯಾವ ತಂಬಾಕು ಕಾರಣವಾಗುತ್ತಿದೆ ಎಂಬದನ್ನು ಪರಿಶೀಲಿಸಿ ಅಂತಹ ಪ್ರದೇಶಗಳಲ್ಲಿ ಉತ್ಪಾದನೆಗೆ ಕಡಿವಾಣ ಹಾಕಲಿದೆ ಎಂದರು. ಪರ್ಯಾಯ ಬೆಳೆ ಬಗ್ಗೆ ಚಿಂತನೆ ನಡೆಸುವ ಮೊದಲು ರೈತರಿಗೆ ಸೂಕ್ತ ಬೆಳೆ, ಹಣಕಾಸು ಹಾಗೂ ಮಾರುಕಟ್ಟೆಯನ್ನು ಸೌಲಭ್ಯವನ್ನು ಕಲ್ಪಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪಂಚಾಯಿತಿ ಸದಸ್ಯ ಎನ್,ಎಸ್.ಜಯಣ್ಣ ಮಾತನಾಡಿ, ತಂಬಾಕು ಬೆಳೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಆದರೆ ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆ ಬಗ್ಗೆ ಚಿಂತನೆ ನಡೆಸಬೇಕು. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ನೀಡುತ್ತಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ತೊರೆನೂರು ಗ್ರಾ.ಪಂ.ಅಧ್ಯಕ್ಷ ಕೆ.ಬಿ.ದೇವರಾಜ್, ಸೋಮವಾರಪೇಟೆ ಹಿರಿಯ ತೋಟಗಾರಿಕೆ ನಿರ್ದೇಶಕ ಬಿ.ಎಸ್. ಮುತ್ತಪ್ಪ, ಕೃಷಿ ಅಧಿಕಾರಿ ಅರುಣಾ, ತಂಬಾಕು ಮಂಡಳಿ ಕ್ಷೇತ್ರಾಧಿಕಾರಿ ಕೃಷ್ಣೇಗೌಡ, ಪರಮೇಶ್ವರಪ್ಪ, ಗ್ರಾ.ಪಂ.ಉಪಾಧ್ಯಕ್ಷ ಶೀಲಾ, ಕುಶಾಲನಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾವ್ಯ , ಪ್ರಗತಿ ಪರ ರೈತ ಎನ್.ಎನ್.ಧರ್ಮಪ್ಪ ಉಪಸ್ಥಿತರಿದ್ದರು. ರೈತರ ಪರವಾಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿ.ಎನ್. ಲೋಕೇಶ್ ಮಾತನಾಡಿದರು. ಇದೇ ಸಂದರ್ಭ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.