ವೀರಾಜಪೇಟೆ, ಡಿ. 21: ಕೇಂದ್ರ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಅನುಷ್ಠಾನಗೊಂಡು ಒಂದು ವರ್ಷ ಕಳೆದಿದ್ದರೂ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಅಂಚೆ ಸೇವಕರಿಗೆ ಇನ್ನೂ ಅದರ ಪ್ರಯೋಜನ ಸಿಕ್ಕಿಲ್ಲ ಎಂದು ದೇಶಾದ್ಯಂತ ಅಂಚೆ ಸೇವಕರು ನಡೆಸುತ್ತಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ.

ಹಲವು ವರ್ಷಗಳಿಂದ ದಿನಕ್ಕೆ 8-10 ಗಂಟೆ ಕರ್ತವ್ಯ ನಿರ್ವಹಿಸಿದರೂ ಇಲಾಖೆ ನಿರಂತರವಾಗಿ ಶೋಷಣೆ ಮಾಡುತ್ತಿದೆ. ಹಾಲಿ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಚೆ ನೌಕರರಿಗೆ ಕರ್ತವ್ಯಕ್ಕೆ ತಕ್ಕಂತೆ ವೇತನ, ಸೇವಾ ಭದ್ರತೆ, ಪಿಂಚಣಿ ಇಲ್ಲ ಎಂದು ಅಂಚೆ ಪ್ರತಿನಿಧಿಗಳು ಪತ್ರಿಕೆಯೊಂದಿಗೆ ದೂರಿದರು.

ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ. ಕಮಲೇಶ್ ಚಂದ್ರ ವರದಿಯನ್ನು ಸಂಪೂರ್ಣ ವಾಗಿ ಜಾರಿಗೊಳಿಸುವವರೆಗೆ ಅನಿರ್ಧಿಷ್ಟಾವಧಿ ಮುಷ್ಕರ ಹೂಡುವದಾಗಿ ಅಧ್ಯಕ್ಷ ಕುರಿಯನ್ ಹೇಳಿದರು. ಈ ಸಂದರ್ಭ ಉಪಾಧ್ಯಕ್ಷ ಎ.ಯು. ಪೂಣಚ್ಚ, ಕಾರ್ಯದರ್ಶಿ ಮಂಜುನಾಥ್, ಅಚ್ಚಯ್ಯ, ಖಜಾಂಚಿ, ಎಸ್. ಪ್ರಶಾಂತ್, ಸುಶೀಲ ಸತೀಶ ಮೊದಲಾದವರು ಇದ್ದರು.

- ರಜಿತಾ ಕಾರ್ಯಪ್ಪ