ನೀರು ಪಾಲಾಗಿರುವ ಶಂಕೆ ಕೂಡಿಗೆ, ಡಿ. 19 : ಶನಿವಾರಸಂತೆಯ ಜಾವಿದ್ ಎಂಬ ವ್ಯಕ್ತಿ ತನ್ನ ಬೈಕ್, ಜರ್ಕಿನ್ ಮತ್ತು ಮೊಬೈಲ್‍ನ್ನು ಕೂಡಿಗೆ ಸಮೀಪದ ಕಣಿವೆ ಗ್ರಾಮದಲ್ಲಿ ಹಾರಂಗಿ ಬಲೆದಂಡೆ ನಾಲೆ ಸಮೀಪ ಬಿಟ್ಟು ಕಾಣೆಯಾಗಿದ್ದಾನೆ. ಇದುವರೆಗೂ ಈತನ ಪತ್ತೆಯಾಗಿಲ್ಲ. ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯ ಮೇಲೆ ಕುಟುಂಬಸ್ಥರು ಪೊಲೀಸರ ಸಹಕಾರದೊಂದಿಗೆ ಹಾರಂಗಿ ಕಚೇರಿಗೆ ಮನವಿ ಮಾಡಿದ ಮೇರೆಗೆ ಅಧಿಕಾರಿಗಳು ಹಾರಂಗಿ ನಾಲೆಯ ನೀರನ್ನು ಸ್ಥಗಿತಗೊಳಿಸಿದ್ದಾರೆ.

ಜಾವಿದ್ ಕುಟುಂಬಸ್ಥರು ಸಮೀಪದ ಹಾರಂಗಿ ಬಲದಂಡೆ ನೀರು ಹೆಚ್ಚಾಗಿ ಸಂಗ್ರಹವಾಗುವ ಮೈಸೂರು ಜಿಲ್ಲೆಯ ಕರಡಿಲಕ್ಕನಕೆರೆಯಲ್ಲಿ ಹುಡುಕಾಟದಲ್ಲಿದ್ದಾರೆ. ಆದರೆ, ಯಾವದೇ ಮಾಹಿತಿ ದೊರೆತಿಲ್ಲ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಹಾಗೂ ಕುಟುಂಬಸ್ಥರು ಕಾಣೆಯಾಗಿರುವ ಜಾವಿದ್ ಹುಡುಕಾಟದಲ್ಲಿದ್ದಾರೆ.