ಕುಶಾಲನಗರ, ಡಿ. 19: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 11 ಅಂಗಡಿ ಮಳಿಗೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಗಣಪತಿ ದೇವಾಲಯಕ್ಕೆ ಸೇರಿದ 11 ಅಂಗಡಿ ಮಳಿಗೆಗಳ ಮಾಲೀಕರ ಮತ್ತು ಸಮಿತಿಯ ನಡುವೆ ವ್ಯಾಜ್ಯದ ಹಿನ್ನಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ದೇವಸ್ಥಾನ ಸಮಿತಿ ಪರವಾಗಿ ತೀರ್ಪು ನೀಡಿದ್ದು ಬುಧವಾರ ಬೆಳಗ್ಗೆ ತೆರವುಗೊಳಿಸಲು ನ್ಯಾಯಾಲಯದ ಆದೇಶದೊಂದಿಗೆ ಸಮಿತಿ ಮುಂದಾದ ದೃಶ್ಯ ಗೋಚರಿಸಿತು.
ಈ ಸಂದರ್ಭ 11 ಮಳಿಗೆಯ ಮಾಲೀಕರಲ್ಲಿ ಇಬ್ಬರನ್ನು ಹೊರತುಪಡಿಸಿದಂತೆ ಉಳಿದ 9 ಮಂದಿ ಮಳಿಗೆಗೆ ಬೀಗ ಜಡಿದು ತೆರಳಿದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಅಂಗಡಿಗಳ ಮುಂಭಾಗ ಸಂಗ್ರಹಿಸಿದ್ದ ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ಕಳೆದ 40 ವರ್ಷಗಳಿಂದ ಈ ಮಳಿಗೆ ವಿಷಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು ಇದೀಗ ನ್ಯಾಯಾಲಯ ದೇವಸ್ಥಾನ ಸಮಿತಿ ಪರವಾಗಿ ತೀರ್ಪು ನೀಡಿದೆ. ಹಲವು ದಶಕಗಳಿಂದ ಪತ್ರಿಕಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ.ಪಿ.ಪ್ರಕಾಶ್ ಮತ್ತು ಇನ್ನೋರ್ವ ಉದ್ಯಮಿ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದ ದೃಶ್ಯ ಕಂಡುಬಂತು. ವಿವಾದಿತ ಕಟ್ಟಡಕ್ಕೆ ನೀಡಲಾದ ವಿದ್ಯುತ್ ಸಂಪರ್ಕ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಸಮಿತಿಯ ಮನವಿ ಮೇರೆಗೆ ಅಧಿಕಾರಿಗಳು ಕಡಿತಗೊಳಿಸಲು ಕ್ರಮಕೈಗೊಂಡರು.
ಈ ಸಂದರ್ಭ ಪ್ರತಿಕ್ರಿಯಿಸಿದ ದೇವಾಲಯ ಸಮಿತಿ ಪರ ವಕೀಲರಾದ ಕರುಣಾಕರನ್, ಎಲ್ಲಾ 11 ಅಂಗಡಿ ಮುಂಗಟ್ಟುಗಳನ್ನು ಕೂಡಲೆ ತೆರವುಗೊಳಿಸಲು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ ಎಂದು ತಿಳಿಸಿದರು. ಉಳಿದಂತೆ ನ್ಯಾಯಾಲಯದ ಆದೇಶ ಪ್ರಕಾರ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿಸುವ ಪ್ರಕ್ರಿಯೆಗೆ ಮುಂದಾಗುವದಾಗಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷ ವಿ.ಎನ್.ವಸಂತಕುಮಾರ್ ತಿಳಿಸಿದ್ದಾರೆ.