ಶನಿವಾರಸಂತೆ, ಡಿ. 19 : ಸಮಾಜ ಸೇವೆ ಮಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ರೋಟರಿ ಸಂಸ್ಥೆಯ ತತ್ವ ಸಿದ್ಧಾಂತಗಳು ಸಮಾಜದ ಸಾಮಾನ್ಯ ಜನತೆಗೆ ತಲಪುವದು ಮುಖ್ಯ ಉದ್ದೇಶ. ಸೇವಾ ವ್ಯಾಪ್ತಿ ಬೆಳೆದಂತೆ ರೋಟರಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಮಾಡುತ್ತಲೇ ಇದೆ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ರಾಜ್ಯಪಾಲ ರೋಹಿನಾತ್ ಪಿ. ಅಬಿಮತ ವ್ಯಕ್ತಪಡಿಸಿದರು.

ಕೊಡ್ಲಿಪೇಟೆ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆದ ಸನ್ನದು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಪರಸ್ಪರ ಹೊಂದಾಣಿಕೆ ಸಹಕಾರ ಮನೋಭಾವ ಸಂಪೂರ್ಣ ಕಣ್ಮರೆ ಯಾಗುತ್ತಿದೆ. ನೂತನವಾಗಿ ರೋಟರಿ ಸಂಸ್ಥೆಗೆ ಸೇರಿದ ಸದಸ್ಯರು ಸ್ನೇಹ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಮುಂದೊಂದು ದಿನ ಉತ್ತಮ ನಾಯಕರಾಗಿ ಹೊರಹೊಮ್ಮಬಹುದು ಎಂದರು.

ಜಿಲ್ಲಾ ಅಧ್ಯಕ್ಷ ರವೀಂದ್ರ ರೈ ಮಾತನಾಡಿ ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷ ಸ್ಥಾನ ಕೇವಲ ಒಂದು ವರ್ಷ. ಆ ಸಮಯವನ್ನು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಕೊಳ್ಳಬೇಕು. ಕ್ಲಬ್‍ನ ಕಾರ್ಯಕ್ರಮಗಳು ಅವಿಸ್ಮರಣೀ ಯಗೊಳಿಸಲು ಎಲ್ಲಾ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.

ಸೋಮವಾರಪೇಟೆ ರೋಟರಿ ಹಿಲ್ಸ್ ಸಹಭಾಗಿತ್ವದಲ್ಲಿ ಆರಂಭಗೊಂಡ ರೋಟರಿ ಹೇಮಾವತಿ ಕೊಡ್ಲಿಪೇಟೆ ಹೆಸರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆಗೆ ಒಟ್ಟು 32 ಮಂದಿ ಸದಸ್ಯರು ಪದಗ್ರಹಣ ಸ್ವೀಕರಿಸಿದರು. ಜಿಲ್ಲಾ ರಾಜ್ಯಪಾಲ ರೋಟರಿ ಪಿನ್ ಹಾಕುವ ಮೂಲಕ ಸ್ವಾಗತಿಸಿದರು. ನಂತರ ನೂತನ ಸ್ಥಾಪಕ ಅಧ್ಯಕ್ಷ ಎಂ.ಜೆ. ಪ್ರವೀಣ್ ಹಾಗೂ ಕಾರ್ಯದರ್ಶಿ ಹೆಚ್.ಎಂ.ದಿವಾಕರ್ ಅವರುಗಳಿಗೆ ಸಂಸ್ಥೆಯ ತತ್ವ ಸಿದ್ಧಾಂತಗಳನ್ನು ವಿವರಿಸಿ ಪದÀವಿ ಪ್ರದಾನ ಮಾಡಿದರು.

ವೇದಿಕೆಯಲ್ಲಿ ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಪಿ.ಕೆ.ರವಿ, ಕಾರ್ಯದರ್ಶಿ ಪಿ.ನಾಗೇಶ್, ಜಿಲ್ಲಾ ಉಪ ರಾಜ್ಯಪಾಲ ಧರ್ಮಪುರ ನಾರಾಯಣ್, ವಿಭಾಗಿಯ ಕಾರ್ಯದರ್ಶಿ ಕ್ರಿಜ್ವಲ್ ಕೋಟ್ಸ್, ಕಲ್ಲುಮಠಾಧ್ಯಕ್ಷ ಮಹಾಂತ ಸ್ವಾಮೀಜಿ, ಸೋಮವಾರಪೇಟೆ, ಕುಶಾಲನಗರ, ಪಿರಿಯಾಪಟ್ಟಣ ರೋಟರಿ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.