ಕುಶಾಲನಗರ, ಡಿ. 20: ಕುಶಾಲನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಪತ್ತೆ ಮಾಡಲು ಪೊಲೀಸ್ ಇಲಾಖೆ ಯಿಂದ ವಿಶೇಷ ಕಾರ್ಯಾ ಚರಣೆ ಮಾಡಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ.ಪಿ. ತಿಳಿಸಿದ್ದಾರೆ. ಕುಶಾಲನಗರದ ಕನ್ನಿಕಾ ಸಭಾಂಗಣದಲ್ಲಿ ನಡೆದ ಸುಗಮ ಸಂಚಾರ ವ್ಯವಸ್ಥೆ ಮತ್ತು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಾಲಾ ಮಕ್ಕಳ ಭದ್ರತೆ ಬಗ್ಗೆ ಹೆಚ್ಚಿನ ನಿಗಾವಹಿಸುವದು, ಯಾವದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಎಚ್ಚರವಹಿಸುವದು, ಮಕ್ಕಳ ಶೋಷಣೆ ತಪ್ಪಿಸಲು ಶಾಲಾ ಆವರಣದಲ್ಲಿ ದೂರು ಪೆಟ್ಟಿಗೆ ಅಳವಡಿಸುವದು ಸೇರಿದಂತೆ ಚಾಲನಾ ಪರವಾನಗಿ ರಹಿತವಾಗಿ ವಾಹನ ಚಲಾಯಿಸುವ ಮಕ್ಕಳ ಬಗ್ಗೆ ಪೊಲೀಸರು ಕ್ರಮಕೈಗೊಳ್ಳುವಂತೆ ಸೂಚಿಸಲಾಗುವದು ಎಂದರು.

ಪಟ್ಟಣದಲ್ಲಿ ಸಮರ್ಪಕ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸುವ ಸಂದರ್ಭ ಅದಕ್ಕೆ ಅಡ್ಡಿ ಮಾಡದೆ ಇಲಾಖೆಯೊಂದಿಗೆ ಸಹಕರಿಸ ಬೇಕೆಂದು ಅವರು ಮನವಿ ಮಾಡಿದರು. ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯನ್ನು ವಿಸ್ತರಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವದು. ಸಮರ್ಪಕ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವದು, ಸುಗಮ ಸಂಚಾರಕ್ಕೆ ಇಲಾಖೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಿದೆ ಎಂದರು.

ಸಭೆಯಲ್ಲಿ ಪಟ್ಟಣದ ಪ್ರಮುಖರು ಸೇರಿದಂತೆ ಸುಂಟಿಕೊಪ್ಪ, ಸೋಮವಾರಪೇಟೆ ವ್ಯಾಪ್ತಿಯ ನಾಗರಿಕರು ತಮ್ಮ ವ್ಯಾಪ್ತಿಯ ಸಂಚಾರಿ ವ್ಯವಸ್ಥೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.

ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ಮಾಹಿತಿ ನೀಡಿದರು. ಅಪರಾಧ ತಡೆ ಬಗ್ಗೆ ಡಿವೈಎಸ್ಪಿ ಪಿ.ಕೆ. ಮುರಳೀಧರ್ ಗಮನ ಸೆಳೆದರು. ಸಾರ್ವಜನಿಕರ ಜೊತೆ ಸುಗಮ ಸಂಚಾರ ವ್ಯವಸ್ಥೆ ಮತ್ತು ಅಪರಾಧ ತಡೆ ಬಗ್ಗೆ ಸಮಾಲೋಚನೆ ನಡೆಯಿತು.

ಇದೇ ಸಂದರ್ಭ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಬಹುಮಾನ ವಿತರಿಸಿದರು.

ವೃತ್ತ ನಿರೀಕ್ಷಕರುಗಳಾದ ಕ್ಯಾತೆಗೌಡ, ನಂಜುಂಡೇಗೌಡ, ಠಾಣಾಧಿಕಾರಿ ಪಿ. ಜಗದೀಶ್, ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಇದ್ದರು.