ಕೂಡಿಗೆ, ಡಿ. 12: ಕೂಡಿಗೆ ಗ್ರಾ.ಪಂ. ಮಾಸಿಕ ಸಭೆಯು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸದಸ್ಯರುಗಳಾದ ಕೆ.ವೈ. ರವಿ, ಹೆಚ್.ಎಸ್. ರವಿ ಹಾಗೂ ರಾಮಚಂದ್ರ ಅವರು ಆದರ್ಶ ಗ್ರಾಮ ಯೋಜನೆಯ ಬಗ್ಗೆ ಚರ್ಚಿಸಿ ಅಧಿಕಾರಿಗಳಿಂದ ಯೋಜನೆಯ ಬಗ್ಗೆ ಮಾಹಿತಿ ಪಡೆದರು. ಹದಿನಾಲ್ಕನೇ ಹಣಕಾಸಿನಿಂದ ಯೋಜನೆಗಳನ್ನು ಕೈಗೊಳ್ಳುವ ಕಾಮಗಾರಿಗಳ ಕ್ರಿಯಾ ಯೋಜನೆಯ ಬಗ್ಗೆ ಸವಿಸ್ತಾರವಾಗಿ ಚರ್ಚೆಗಳು ನಡೆಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಕೂಡಿಗೆ ಗ್ರಾ.ಪಂ.ಯು ಕೇಂದ್ರ ಸರ್ಕಾರದ ಸಂಸದ ಆದರ್ಶ ಗ್ರಾಮ ಯೋಜನೆಗೆ ಒಳಪಟ್ಟಿದ್ದು, ಈ ಯೋಜನೆಯ ಬಗ್ಗೆ ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆದಿದ್ದು, ಸದ್ಯದಲ್ಲೇ ಆ ಹಂತದ ಕಾಮಗಾರಿಗಳು ನಡೆಯಲಿವೆ ಎಂದರು. ಮುಂದಿನ ದಿನಗಳಲ್ಲಿ ಗ್ರಾ.ಪಂ ವ್ಯಾಪ್ತಿಗೆ ಅತಿ ಮುಖ್ಯವಾಗಿರುವ ಕುಡಿಯುವ ನೀರು, ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿ.ಜೆ. ಲೋಕೇಶ್ ಮಾತನಾಡಿ, ಸಭೆಗೆ ಸರ್ಕಾರದ ಹೊಸ ಹೊಸ ಯೋಜನೆಗಳ ಮಾಹಿತಿ ನೀಡುವದರ ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಸದಸ್ಯರುಗಳು ತಮ್ಮ ವ್ಯಾಪ್ತಿಯ ಯೋಜನೆಗಳನ್ನು ಕೈಗೊಳ್ಳಲು ಆ ವಾರ್ಡಿನ ಗ್ರಾಮಸ್ಥರನ್ನು ಉದ್ಯೋಗ ಖಾತ್ರಿಗೆ ನೋಂದಣಿ ಮಾಡಿಕೊಳ್ಳುವ ಮೂಲಕ ಗ್ರಾಮದ ಪ್ರಗತಿಗೆ ಸಹಕರಿಸಬೇಕೆಂದರು. ಗ್ರಾಮಸ್ಥರು ಕೂಡಿಗೆ ವೃತ್ತದಲ್ಲಿ ವಿದ್ಯುತ್ ಕಂಬ ಅಳವಡಿಸುತ್ತಿರುವದರ ವಿರುದ್ಧ ಸಭೆಗೆ ಅರ್ಜಿ ಸಲ್ಲಿಸಿದರು. ಇದಕ್ಕೆ ಸಂಬಂಧಪಟ್ಟಂತೆ ಆಡಳಿತ ಮಂಡಳಿ ಸ್ಥಳ ವೀಕ್ಷಣೆ ಮಾಡಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಕುಮಾರ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು. ಗ್ರಾ.ಪಂ. ಬಿಲ್‍ಕಲೆಕ್ಟರ್ ಕೆ.ಸಿ. ರವಿ ಸ್ವಾಗತಿಸಿ, ವಂದಿಸಿದರು.