ಮಡಿಕೇರಿ, ಡಿ. 12: ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಕುರಿತು ಕರಡು ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಿ ಮಾತನಾಡಿದ ಅವರು, ಪ್ರಕಟಣೆ ಮಾಡಿರುವ ಕರಡು ಮತದಾರರ ಪಟ್ಟಿಯಿಂದ ಬಾಧಿತರಾಗುವ ವ್ಯಕ್ತಿಗಳು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಬಿಎಲ್‍ಒ ಅವರಿಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವದಾದರೂ ದೂರುಗಳು ಬಂದಲ್ಲಿ ದೂರುಗಳನ್ನು ಪರಿಶೀಲನೆ ಮಾಡಿ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಥಳೀಯ ಸಂಸ್ಥೆ ಚುನಾವಣೆ ವಿದ್ಯುನ್ಮಾನ ಮತಯಂತ್ರದ ಮೂಲಕ ನಡೆಯಲಿದೆ. ವಿವಿಪ್ಯಾಟ್ ಇರುವದಿಲ್ಲ ಎಂದು ಸಭೆಯಲ್ಲಿ ತಿಳಿಸಿದರು. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 23 ವಾರ್ಡುಗಳಿದ್ದು, 26 ಮತಗಟ್ಟೆಗಳನ್ನು ತೆರೆಯಲಾಗುವದು ಎಂದು ಸಭೆಯಲ್ಲಿ ತಿಳಿಸಿದರು.
ಪ್ರಕಟಣೆಗೊಳಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಪರಿಶೀಲಿಸಿ ಯಾವದಾದರೂ ಲೋಪಗಳು ಕಂಡುಬಂದಲ್ಲಿ ಸರಿಪಡಿಸಿಕೊಳ್ಳಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಮಡಿಕೇರಿ ತಹಶೀಲ್ದಾರ್ ಕುಸುಮ, ನಗರಸಭೆ ಆಯುಕ್ತ ರಮೇಶ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇತರರು ಇದ್ದರು.