ಮಡಿಕೇರಿ, ಡಿ. 12: ಕುಶಾಲನಗರದಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ದಿಲೀಪ್ ಕುಮಾರ್ ಅವರ ಹತ್ಯೆಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಮಂಡಳಿಯ ಕೊಡಗು ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಕುಶಾಲನಗರದ ವೈದ್ಯ ಡಾ. ದಿಲೀಪ್ ಹತ್ಯೆ ಪ್ರಕರಣ ವೈದ್ಯಕೀಯ ಸಮುದಾಯದಲ್ಲಿ ಭಯಕ್ಕೆ ಕಾರಣವಾಗಿದೆ. ಆರೋಪಿಗಳನ್ನು ವಿಳಂಬರಹಿತವಾಗಿ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕ್ಕೆ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಭಾರತೀಯ ವೈದ್ಯಕೀಯ ಮಂಡಳಿಯ ಕೊಡಗು ಘಟಕದ ಅಧ್ಯಕ್ಷ ಡಾ. ಎನ್.ಎಸ್. ನವೀನ್, ಗೌರವ ಕಾರ್ಯದರ್ಶಿ ಡಾ. ಸಿ.ಆರ್. ಪ್ರಶಾಂತ್ ಒತ್ತಾಯಿಸಿದರು.

ಜಿಲ್ಲಾಧಿಕಾರಿಯನ್ನು ಭೇಟಿಯಾದ ವೈದ್ಯರ ನಿಯೋಗದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯ ಕೊಡಗು ಘಟಕದ ಪ್ರಮುಖರಾದ ಡಾ.ಮೋಹನ್ ಅಪ್ಪಾಜಿ, ಡಾ.ಕಸ್ತೂರಿ, ಡಾ.ರಾಜೇಶ್ವರಿ, ಡಾ. ಜನಾರ್ಧನ್, ಡಾ.ಕರುಂಬಯ್ಯ, ಡಾ. ದೇವಯ್ಯ, ಡಾ. ಅಭಿನಂದನ್, ಡಾ. ಶಶಾಂಕ್, ಡಾ. ಮಲ್ಲಿಕಾರ್ಜುನ್ ಇದ್ದರು.