ಮಡಿಕೇರಿ : ಚಂಪಾಷಷ್ಠಿ ಪ್ರಯುಕ್ತ ತಾ. 13 ರಂದು (ಇಂದು) ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ನಾಗ ದೇವರಿಗೆ ಅಭಿಷೇಕ ನಡೆಯುತ್ತದೆ. ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಈ ಸೇವೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

* ಕುಶಾಲನಗರ : ಕುಶಾಲನಗರ ಶ್ರೀ ಉದ್ಭವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ತಾ. 13 ರಂದು (ಇಂದು) ಬೆಳಿಗ್ಗೆ ದೇವರಿಗೆ ಅಭಿಷೇಕ, ಷಷ್ಠಿ ಪೂಜೆ ಆರಂಭಗೊಳ್ಳಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿಯೊಂದಿಗೆ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ವಿವಿಧ ಕಲಾತಂಡಗಳೊಂದಿಗೆ ದೇವರನ್ನು ಮೆರವಣಿಗೆ ಮೂಲಕ ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ತೆರಳಲಾಗುವದು ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಆರ್. ಚಿಕ್ಕೇಗೌಡ ತಿಳಿಸಿದ್ದಾರೆ.

* ಗೋಣಿಕೊಪ್ಪ: ಹಾತೂರು ಗ್ರಾಮದಲ್ಲಿರುವ ಶ್ರೀ ನಾಗ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ತಾ. 13 ರಂದು (ಇಂದು) ಬೆಳಿಗ್ಗೆ 6.30 ಕ್ಕೆ ಗಣಪತಿ ಹೋಮ, 12 ಗಂಟೆಗೆ ಮಹಾಮಂಗಳಾರತಿ ಹಾಗೂ ಭಕ್ತರಿಗೆ ಅನ್ನದಾನ ನಡೆಯಲಿದೆ.

* ನಾಪೋಕ್ಲು : ಸಮೀಪದ ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯದಲ್ಲಿ ತಾ.13ರಂದು (ಇಂದು) ಷಷ್ಠಿ ಹಬ್ಬದ ಪ್ರಯುಕ್ತ ನೆಲಜಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘದ ವತಿಯಿಂದ ವಿಶೇಷ ನಾಗಪೂಜೆ ಹಾಗೂ ಸಾಮೂಹಿಕ ಆಶ್ಲೇಷ ಬಲಿ ಜರುಗಲಿವೆ.

* ಸಿದ್ದಾಪುರ: ಸುಬ್ರಮಣಿ ಷಷ್ಠಿ ಪ್ರಯುಕ್ತ ಸಿದ್ದಾಪುರ ಹೈಸ್ಕೂಲ್ ಪೈಸಾರಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಡಿಕೇರಿ ರಸ್ತೆಯ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ತಾ. 13 ರಂದು (ಇಂದು) ವಿವಿಧ ಪೂಜಾಕೈಂಕರ್ಯಗಳು, ಮಹಾ ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.