ಕುಶಾಲನಗರ, ಡಿ. 12: ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ತಾವು ಹೇಳಿದ ಕೆಲಸಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿ ಸ್ಥಳೀಯ ಪ.ಪಂ. ಸದಸ್ಯೆ ಮತ್ತು ಅವರ ಪತಿ ಸೇರಿ ತಮ್ಮ ವಾರ್ಡ್‍ನಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ.

13ನೇ ವಾರ್ಡ್ ಗೌಡ ಸಮಾಜ ಮುಂಭಾಗ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮನೆಗೆ ಚರಂಡಿಗೆ ಕಲ್ಲು, ಮಣ್ಣು ತುಂಬಿದ ಹಿನ್ನೆಲೆಯಲ್ಲಿ ಕೊಳಚೆ ನೀರು ಮುಂದಕ್ಕೆ ಹರಿಯದೆ ಸ್ಥಗಿತಗೊಂಡು ರಸ್ತೆ ಮೇಲೆ ಹರಿದಾಡುತ್ತಿದೆ. ಆದಷ್ಟು ಬೇಗ ಚರಂಡಿಯಿಂದ ತ್ಯಾಜ್ಯ ತೆರವುಗೊಳಿಸಿ ಚರಂಡಿ ಹಾನಿಗೊಳಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಮುಖ್ಯಾಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು

ವಾರ್ಡ್ ಸದಸ್ಯೆ ಜಯಲಕ್ಷ್ಮಿ, ಪತಿ ನಂಜುಂಡಸ್ವಾಮಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇ ಕೆಂದು ಆಗ್ರಹಿಸಿ ಧರಣಿಗೆ ಮುಂದಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಪ್ರತಿಕ್ರಿಯಿಸಿದ್ದು ಬುಧವಾರ ಮಧ್ಯಾಹ್ನ ತಮ್ಮ ಕಚೇರಿಗೆ ನಂಜುಂಡಸ್ವಾಮಿ ಮತ್ತು ಕೆಲವು ವ್ಯಕ್ತಿಗಳು ಬಂದು ಚರಂಡಿಯಲ್ಲಿ ತುಂಬಿದ ಮಣ್ಣು ತೆರವುಗೊಳಿಸಲು ತಕ್ಷಣ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭ ಪರಿಶೀಲನೆ ನಡೆಸುವದಾಗಿ ತಾನು ಭರವಸೆ ನೀಡಿದರೂ ತೃಪ್ತಿಗೊಳ್ಳದೆ ಧರಣಿಗೆ ಮುಂದಾಗಿರುವದು ಸರಿಯಲ್ಲ ಎಂದಿದ್ದಾರೆ.

ಈ ನಡುವೆ ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಸದಸ್ಯರುಗಳಾದ ಸುಂದರೇಶ್, ಸುರೇಶ್, ಪ್ರಮೋದ್ ಮುತ್ತಪ್ಪ, ಮಾಜಿ ಸದಸ್ಯರುಗಳಾದ ಎಚ್.ಜೆ. ಕರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಬಿಜೆಪಿ ಯುವಮೋರ್ಚಾ ಮುಖಂಡ ಎಂ.ಡಿ. ಕೃಷ್ಣಪ್ಪ, ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಸೇರಿದಂತೆ ಹಲವು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ ಸಂಧಾನಕ್ಕೆ ಪ್ರಯತ್ನಿಸಿದರೂ ಸಫಲವಾಗದೆ ಸಂಜೆ ತನಕ ಧರಣಿ ಮುಂದುವರೆದಿತ್ತು. ಅಂತಿಮವಾಗಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಧರಣಿ ನಿರತರನ್ನು ಸಮಾಧಾನಿಸಿದ ಹಿನ್ನಲೆಯಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ.