ಕುಶಾಲನಗರ, ಡಿ. 11: ಕುಶಾಲನಗರ ಪಟ್ಟಣದ ಸ್ವಚ್ಛತೆ ಹಿನ್ನೆಲೆಯಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಹಲವು ಯೋಜನೆಗಳನ್ನು ಹಮ್ಮಿಕೊಂಡರೂ ಪಟ್ಟಣದಲ್ಲಿ ಮಾತ್ರ ಸಂಪೂರ್ಣ ಸ್ವಚ್ಛತೆ ಕಾಪಾಡಲು ಅಸಾಧ್ಯವಾಗಿದೆ. ಆದರೆ ಈ ನಡುವೆ ಇಬ್ಬರು ಅಪರಿಚಿತ ಮಹಿಳೆಯರು ಕುಶಾಲನಗರದ ಸಾರ್ವಜನಿಕ ಸ್ಥಳಗಳನ್ನು ಸ್ವಯಂ ಪ್ರೇರಿತರಾಗಿ ಸ್ವಚ್ಛ ಮಾಡುತ್ತಿರುವ ದೃಶ್ಯ ದಿನನಿತ್ಯ ಕಾಣಬಹುದು.

ಕುಶಾಲನಗರ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯದ ಆವರಣದಲ್ಲಿ ಮಹಿಳೆಯೊಬ್ಬರು ಕಳೆದ ಹಲವು ವರ್ಷಗಳಿಂದ ನೆಲೆಸಿದ್ದು ದೇವಾಲಯದ ಆವರಣ ರಸ್ತೆ ಭಾಗವನ್ನು ದಿನನಿತ್ಯ ಸ್ವಚ್ಛಗೊಳಿಸುತ್ತಿರುವದು ಎಂದಿನ ಕಾಯಕವಾಗಿದೆ. ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಕಾಯಕ ನಡೆಯುತ್ತಿದ್ದು, ಈ ಮಹಿಳೆಯ ಮೂಲ ಸ್ಥಳ ತಿಳಿದುಬಂದಿಲ್ಲ.

ಕೆಲವು ಸ್ಥಳೀಯರ ಸಹಾಯಹಸ್ತದೊಂದಿಗೆ ಜೀವನ ನಡೆಸುತ್ತಿರುವ ಈ ವೃದ್ಧೆ ರಾತ್ರಿ ವೇಳೆ ದೇವಾಲಯದ ಹೊರ ಆವರಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವದರೊಂದಿಗೆ ತನ್ನ ಸುತ್ತಮುತ್ತ ಸ್ವಚ್ಛತೆ ಕಾಪಾಡುವಲ್ಲಿ ಯಶಸ್ವಿಯಾಗುವದರೊಂದಿಗೆ ಇತರರಿಗೆ ಕೂಡ ಮಾದರಿ ಆಗಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಕುಶಾಲನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆವರಣವನ್ನು ಸ್ವಚ್ಛವಾಗಿಡಲು ಸರಕಾರ ಗುತ್ತಿಗೆ ನೀಡಿದ್ದರೂ ಪರಿಪೂರ್ಣವಾಗಿ ಸ್ವಚ್ಛತೆ ಕಾಪಾಡಲು ಹಲವು ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಈ ನಡುವೆ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಪ್ರತ್ಯಕ್ಷವಾಗಿದ್ದು, ದಿನನಿತ್ಯ ಇಡೀ ಆವರಣವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಬಸ್ ತಂಗುದಾಣ, ವಾಹನ ನಿಲುಗಡೆ ಸ್ಥಳಗಳಲ್ಲಿ ಮತ್ತು ಮುಖ್ಯರಸ್ತೆಗೆ ತೆರಳುವ ಸ್ಥಳಗಳನ್ನು ಈ ಮಹಿಳೆ ಮುಂಜಾನೆ ಹಾಗೂ ಸಂಜೆ ವೇಳೆ ಗುಡಿಸಿ ಸ್ವಚ್ಛಗೊಳಿಸುತ್ತಿರುವದು ಸಾಮಾನ್ಯ ದೃಶ್ಯವಾಗಿದೆ.

ಮಹಿಳೆ ಯಾರೊಂದಿಗೂ ಬೆರೆಯದೆ ಈ ಕಾಯಕದಲ್ಲಿ ತಮ್ಮನ್ನು ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದು ಯಾವದೇ ರೀತಿಯ ಭಿಕ್ಷಾಟನೆಯಾಗಲಿ ಹಣದ ಬೇಡಿಕೆಯಾಗಲಿ ಇಡದೆ ನೀಡುವ ಆಹಾರವನ್ನು ಪಡೆಯುವದರೊಂದಿಗೆ ದಿನದೂಡುತ್ತಿರುವದು ಎಂದಿನ ಬೆಳವಣಿಗೆಯಾಗಿದೆ.

ಬಸ್ ನಿಲ್ದಾಣ ಅಥವಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೆಲೆ ಕಾಣುತ್ತಿರುವ ಈಕೆಯ ಮೂಲದ ಬಗ್ಗೆ ವಿಚಾರಿಸಲು ತೆರಳಿದರೆ ಯಾವದೇ ರೀತಿಯ ಪ್ರತಿಕ್ರಿಯೆ ದೊರಕುವದಿಲ್ಲ.

ಒಟ್ಟಾರೆ ಈ ಮಹಿಳೆಯ ಕಾಯಕ ಕೆಎಸ್‍ಆರ್‍ಟಿಸಿ ನೌಕರರು ಸೇರಿದಂತೆ ಕುಶಾಲನಗರದ ನಾಗರಿಕರಿಗೆ ಮೆಚ್ಚುಗೆಯಾಗಿರುವದು ಮಾತ್ರ ಸತ್ಯ.

ಸ್ವಚ್ಛ ಭಾರತ್ ಅಭಿಯಾನ ಕೇವಲ ದಾಖಲೆಗಳಲ್ಲಿ ಮಾತ್ರ ಕಂಡು ಬರುತ್ತಿರುವ ಅಥವಾ ಪ್ರಚಾರ ಗಿಟ್ಟಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಹೆಸರಿನಲ್ಲಿ ಕ್ಷಣಮಾತ್ರ ಸ್ವಚ್ಛತೆಯಲ್ಲಿ ತೊಡಗುವ ಜನರಿಗೆ ಈ ಮಹಿಳೆಯರು ನಿಜಕ್ಕೂ ಮಾದರಿ ಎಂದರೆ ತಪ್ಪಾಗಲಾರದು.

ನಿರ್ಗತಿಕ ಈ ಇಬ್ಬರು ಮಹಿಳೆಯರನ್ನು ಗುರುತಿಸಿ ಸ್ಥಳೀಯ ಆಡಳಿತ ಇವರ ಸಹಾಯಕ್ಕೆ ಮುಂದಾಗುವ ಮೂಲಕ ಮಾನವೀಯತೆ ಮೆರೆಯಬೇಕಾಗಿದೆ.

- ಚಂದ್ರಮೋಹನ್