ಕೂಡಿಗೆ, ಡಿ. 11: ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ಕೃಷಿ ಇಲಾಖೆ ಹಾಗೂ ಕೂಡಿಗೆಯ ಮಣ್ಣು ಆರೋಗ್ಯ ಕೇಂದ್ರ ವತಿಯಿಂದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಅಂಗವಾಗಿ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮವು ಕೂಡಿಗೆಯ ಹೆಗ್ಡಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಕೂಡಿಗೆ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ ಉದ್ಘಾಟಿಸಿದರು. ಭೂಮಿಯ ಮಣ್ಣು ಎಲ್ಲಾ ಬೆಳೆಗಳಿಗೂ ಆಧಾರ. ಒಂದು ಜಮೀನಿನಲ್ಲಿ ಪಡೆಯುವ ಉತ್ಪನ್ನ, ಆ ಜಮೀನಿನ ಗುಣ ಹಾಗೂ ಫಲವತ್ತತೆಯ ಮೇಲೆ ಅವಲಂಭಿಸಿರುತ್ತದೆ. ಆದ್ದರಿಂದ ರೈತರುಗಳು ತಮ್ಮ ಜಮೀನಿನ ಮಣ್ಣನ್ನು ಸಕಾಲದಲ್ಲಿ ಪರೀಕ್ಷಿಸಿ ಕೊಂಡು ಪರೀಕ್ಷಾನುಗುಣವಾಗಿ ಗೊಬ್ಬರಗಳನ್ನು ಹಾಕಿದಾಗ ಅತೀ ಹೆಚ್ಚು ಇಳುವರಿಯನ್ನು ಕಾಣಬಹುದಾಗಿದೆ ಎಂದರು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ ಗೋಣಿಕೊಪ್ಪ ಅರಣ್ಯ ಕಾಲೇಜಿನ ಕೃಷಿ ವಿಜ್ಞಾನಿ ಡಾ.ರವಿ ಮಾತನಾಡಿ, ಮಣ್ಣು ಆರೋಗ್ಯ ಅಭಿಯಾನದಡಿ ರೈತರುಗಳು ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಸ್ಥಳೀಯ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರಿಶೀಲಿಸಿ ಮಣ್ಣಿನ ಮಾದರಿಯನ್ನು ತಿಳಿಯಬೇಕಾಗಿದೆ. ಮಣ್ಣಿನಲ್ಲಿ ದೊರೆಯುವ ಸಸ್ಯ ಪೋಷಕಾಂಶಗಳ ಮಟ್ಟ ಹಾಗೂ ಹೈಬ್ರೀಡ್ ಮತ್ತು ಅಧಿಕ ಇಳುವರಿಕೊಡುವ ಸುಧಾರಿತ ತಳಿಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಸಾವಯವ ಗೊಬ್ಬರಕ್ಕೆ ಹೊತ್ತು ಕೊಟ್ಟು ತಮ್ಮ ಜಮೀನಿಗೆ ಬಳಕೆ ಮಾಡಿಕೊಂಡು ಮಣ್ಣಿನ ಗುಣಧರ್ಮವನ್ನು ತಿಳಿಯಲು ಮಣ್ಣು ಪರೀಕ್ಷೆ ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಮಾದರಿ ಮಣ್ಣನ್ನು ಸಾಂಪ್ರದಾಯಿಕವಾಗಿ ಬೈದ್ಧಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮ ವಿಶ್ಲೇಷಣೆ ಮಾಡುವ ಪದ್ಧತಿಗಳ ಮೂಲಕ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಅದರನುಗುಣ ಬೇಸಾಯ ಮಾಡಿದ್ದೇ ಆದಲ್ಲಿ ರೈತರ ಆರ್ಥಿಕ ಮಟ್ಟ ಸುಧಾರಿಸಲಿದೆ ಎಂದರು. ತಾಲೂಕು ಸಹಾಯಕ ನಿರ್ದೇಶಕ ರಾಜಶೇಖರ್ ಮಾತನಾಡಿ, ಮಣ್ಣು ಪರೀಕ್ಷೆಯಿಂದ ರೈತರಿಗಾಗುವ ಲಾಭದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಅಂಗವಾಗಿ ಹೆಗ್ಡಳ್ಳಿ ಗ್ರಾಮದ ಕೆಲ ರೈತರುಗಳ ಜಮೀನುಗಳಿಗೆ ತೆರಳಿ ಮಣ್ಣಿನ ಪರೀಕ್ಷಾ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭ ಕೊಡಗು ಹಾಸನ ಸಾವಯುವ ಒಕ್ಕೂಟದ ನಿರ್ದೇಶಕ ಕಪಿನಪ್ಪ, ಕೂಡಿಗೆ ಗ್ರಾ.ಪಂ ಸದಸ್ಯರುಗಳಾದ ಕಲ್ಪನ, ಪುಷ್ಪಾ, ರತ್ನಮ್ಮ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು. ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯಲ್ಲಿ ಕೂಡಿಗೆ, ಹೆಗ್ಡಳ್ಳಿ, ಭುವನಗಿರಿ, ಸೀಗೇಹೊಸೂರು, ಮದಲಾಪುರ ವ್ಯಾಪ್ತಿಯ ನೂರಾರು ರೈತರು ಭಾಗವಹಿಸಿ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಮಣ್ಣು ಪರೀಕ್ಷಿಸಿಕೊಂಡ ಕೆಲವು ರೈತರಿಗೆ ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಯಿತು.