ಸಿದ್ದಾಪುರ, ಡಿ. 12: ವನ್ಯ ಮೃಗಗಳ ಹಾವಳಿಯಿಂದ ವಾಲ್ನೂರು- ತ್ಯಾಗತ್ತೂರು ಮತ್ತು ಅಭ್ಯತ್‍ಮಂಗಲ ಗ್ರಾಮದ ರೈತರು ಕಂಗೆಟ್ಟಿದ್ದಾರೆ. ಕೃಷಿ ಉತ್ಪನ್ನಗಳ ನಷ್ಟ ಪರಿಹಾರ ಕೂಡ ಸಂಬಂಧಿಸಿದ ಇಲಾಖೆ ನೀಡದೇ ಇರುವ ಹಿನ್ನೆಲೆಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಈ ಭಾಗದ ರೈತರ ಪರಿಸ್ಥಿತಿ.

ಈ ವ್ಯಾಪ್ತಿಯ ಬೆಳೆಗಾರರಾದ ಕೆ.ಎನ್. ರಮೇಶ್, ಕೆ.ಎ. ಬೋಪಯ್ಯ, ಕೆ.ಎ. ಅಶ್ವತ್, ಬಿ.ಎಸ್. ದಿನೇಶ್ ಮತ್ತು ಇತರೆ ಸಣ್ಣ ಬೆಳೆಗಾರರು ಕಾಡಾನೆ, ಕಾಡುಕೋಣ ಮತ್ತು ಮಂಗಗಳ ವಿಪರೀತ ಕಾಟದಿಂದ ಬದುಕಿನ ಆಧಾರವಾಗಿದ್ದ ಬೆಳೆಗಳನ್ನೇ ಕಳೆದುಕೊಂಡು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಈ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಮೇಘ ಸ್ಫ್ಪೋಟದಿಂದ ಕೆಲ ದಿನಗಳವರೆಗೆ ಕೃಷಿ ಚಟುವಟಿಕೆ ಯಲ್ಲಿ ರೈತರು ತೊಡಗಿಸಿ ಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಭ್ಯತ್‍ಮಂಗಲ ಗ್ರಾಮದ ಸಣ್ಣ ಹಿಡುವಳಿದಾರರಾದ ಕೆ.ಎನ್. ರಮೇಶ್ ಎಂಬವರು ಭತ್ತ ಬಿತ್ತನೆ ಮಾಡಿ ನಾಟಿ ಮಾಡಿ ಮುಗಿಸುವಷ್ಟರಲ್ಲಿ ಆನೆಗಳ ಹಿಂಡು ಅವರ ಸಂಪೂರ್ಣ ಗದ್ದೆಯನ್ನು ನಾಶ ಮಾಡಿತ್ತು. ರಮೇಶ್ ಛಲ ಬಿಡದೇ ಮತ್ತೊಮ್ಮೆ ಬಿತ್ತನೆ ಮಾಡಿ ಇನ್ನೇನು ಈ ವರ್ಷ ಕುಟುಂಬಕ್ಕೆ ಆಧಾರವಾಗಿದ್ದ ಬೆಳೆ ಕೈಗೆ ಬಂತು ಎಂಬ ಹರ್ಷದಲ್ಲಿರುವ ವೇಳೆಯಲ್ಲಿ ಹುತ್ತರಿಗೂ ಮುನ್ನಾ ದಿನವೇ ಇವರ ಗದ್ದೆಗೆ ಧಾಳಿ ಮಾಡಿದ ಕಾಡಾನೆಗಳ ಹಿಂಡು ಸಂಪೂರ್ಣ ಬೆಳೆಯನ್ನು ನಾಶ ಮಾಡಿತ್ತು. ಕೃಷಿ ಬಿಟ್ಟರೆ ನಮಗೆ ಬೇರೆ ಜೀವನ ಮಾರ್ಗವಿಲ್ಲ. ಪ್ರತೀ ವರ್ಷ ಈ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ದೂರು ನೀಡಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಮಹಜರು ನಡೆಸಿ ಪರಿಶೀಲನೆ ಮಾಡಿ ಫೋಟೋ ತೆಗೆದು ಹೋಗುತ್ತಾರೆ. ಆದರೆ ಪರಿಹಾರ ರೂಪದಲ್ಲಿ ಚಿಕ್ಕಾಸು ನಮ್ಮ ಕೈ ಸೇರಿಲ್ಲ ಎಂದು ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಕೂಡ ಭೇಟಿ ಮಾಡಿದರೂ ಯಾವದೇ ಪ್ರಯೋಜನ ಇಲ್ಲ ಎನ್ನುತ್ತಿದ್ದಾರೆ. ಕೃಷಿ ಇಲಾಖೆ ಯವರು ಆಧುನಿಕ ಕೃಷಿ ಮತ್ತು ಭತ್ತ ಬೆಳೆಯುವದರ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿ ಪ್ರೋತ್ಸಾಹದ ಮಾತನಾ ಡುತ್ತಾರೆ. ಕಾಡಾನೆಗಳು, ಕಾಡು ಕೋಣಗಳು ಬೆಳೆಗಳನ್ನು ನಾಶ ಮಾಡಿದಾಗ ಯಾರೊಬ್ಬರ ಸುಳಿವು ಇರುವದಿಲ್ಲ ಎಂದು ಇಲ್ಲಿನ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಕಾಫಿ ಫಸಲು ಬಿಡುವ ಸಮಯವಾಗಿದ್ದು, ಈ ವ್ಯಾಪಿಯ ಅನೇಕ ಕಾಫಿ ತೋಟಗಳಲ್ಲಿ ಕಾಫಿ ಪಸಲು ತಿನ್ನಲು ಮಂಗಗಳು ಲಗ್ಗೆಯಿಡಲಾರಂಭಿಸಿದೆ. ಈಗಾಗಲೇ ಕಟಾವಿಗೆ ಬಂದಿರುವ ಅರೇಬಿಕಾ ಫಸಲನ್ನು ಮಂಗಗಳ ಹಿಂಡು ತಿಂದು ಮುಗಿಸಿವೆ ಎಂದು ಈ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ.

-ಅಂಚೆಮನೆ ಸುಧಿ