ಸಿದ್ದಾಪುರ, ಡಿ. 10: ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಹಾಡಹಗಲೇ ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸಿದ ಓರ್ವನನ್ನು ಗ್ರಾಮಸ್ಥರು ಸೆರೆ ಹಿಡಿದು ಧರ್ಮದ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಾಲ್ದಾರೆ ಸಮೀಪದ ಕಳ್ಳಲದಲ್ಲಿ ನಡೆದಿದೆ.ಮಾಲ್ದಾರೆ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಗೋ ಕಳ್ಳತನ ನಡೆಯುತ್ತಿತ್ತು ಎನ್ನಲಾಗಿದೆ. ಇದೀಗ ಗೋಕಳ್ಳರು ಗೋವುಗಳನ್ನು ಕಳ್ಳತನ ಮಾಡಿ, ಸಾಗಾಟ ಮಾಡಲು ಯತ್ನಿಸಿದ ಪ್ರಕರಣವು ಬೆಳಕಿಗೆ ಬಂದಿದೆ. ಗೋ ಕಳ್ಳತನಕೆ ಯತ್ನಿಸಿದ ಸಂದರ್ಭ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಕಳ್ಳನೋರ್ವನನ್ನು ಸೆರೆಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದು, ಆತನೊಂದಿಗಿದ್ದ ಪ್ರಮುಖ ಈರ್ವರು ಆರೋಪಿಗಳು ವಾಹನ ಸಮೇತ ಪರಾರಿಯಾಗಿದ್ದಾರೆ.ಘಟನೆಯ ವಿವರ : ಮಾಲ್ದಾರೆ ಕಳ್ಳಲ ನಿವಾಸಿಯಾದ ಆನಂದ ಹಾಗೂ ನೇತ್ರ ಎಂಬವರಿಗೆ ಸೇರಿದ ಹಸು, ಕರುಗಳನ್ನು ಸೋಮವಾರದಂದು ಎಂದಿನಂತೆ ಮನೆಯ ಬಳಿ ಮೇಯಲು ಬಿಟ್ಟಿದ್ದರು. ಈ ಸಂದರ್ಭದಲ್ಲಿ ಆನಂದ ಅವರ ಮನೆಯ ಸಮೀಪದ ರಸ್ತೆ ಮೂಲಕ ಕಳ್ಳಲದ ನಿವಾಸಿಯಾದ ಶೇಖರ್ ಎಂಬವರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ರಸ್ತೆ ಬದಿಯ ಕಾಫಿ ತೋಟದ ಬಳಿ ಹಸು, ಕರುವನ್ನು ಅಪರಿಚಿತರು ಕಟ್ಟಿ ಹಾಕಿರುವದನ್ನು ಕಂಡು ಕೂಡಲೇ ಹಸುವಿನ ಮಾಲೀಕ ಆನಂದರಿಗೆ ತಿಳಿಸಿದರು. ಎಚ್ಚೆತ್ತುಕೊಂಡ ಆನಂದ ಅವರ ಪತ್ನಿ ನೇತ್ರ ಬಂದು ನೋಡುವಷ್ಟರಲ್ಲಿ ಹಸು ಕಟ್ಟಿ ಹಾಕಿದ ಸಮೀಪದಲ್ಲಿ ಕಪ್ಪು ಬಣ್ಣದ ಕಾರೊಂದು ರಸ್ತೆ ಬದಿಯಲ್ಲಿ ಸಂಶಯಾಸ್ಪದವಾಗಿ ನಿಲ್ಲಿಸಿರುವದು ಕಂಡುಬಂತು. ಇದರಿಂದ ಗಾಬರಿಗೊಂಡ ನೇತ್ರ ಸಂಶಯಗೊಂಡು ಸಮೀಪದ ನಿವಾಸಿಗಳನ್ನು ಕೂಗಿ ಕರೆಯುವಷ್ಟರಲ್ಲಿ ಮಾರುತಿ ವ್ಯಾನ್ ವೇಗವಾಗಿ ಚಾಲನೆ ಮಾಡಿಕೊಂಡು ತೆರಳಿತು ಎನ್ನಲಾಗಿದೆ. ಗ್ರಾಮಸ್ಥರು ಗುಂಪು ಸೇರಿ ಜಾನುವಾರು ಕಳ್ಳತನಕ್ಕೆ ಬಂದಿದ್ದ, ಚೆನ್ನಯ್ಯನ ಕೋಟೆ ನಿವಾಸಿ ಅಬುತಾಹಿರ್ ಎಂಬಾತನನ್ನು ಸೆರೆ ಹಿಡಿದು ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವಾರು ಹಸು ಕರುಗಳ ಜೀವ ಉಳಿದಂತಾಗಿದೆ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

(ಮೊದಲ ಪುಟದಿಂದ) ಕಳ್ಳತನದ ಪ್ರಮುಖ ಆರೋಪಿ ನೆಲ್ಲಿಕಾಡ್ ನಿವಾಸಿ ಉಬೈದ್ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ.

ಅಬುತಾಹಿರ್ ಗೆ ಗ್ರಾಮಸ್ಥರು ಧರ್ಮದ ಏಟು ನೀಡಿದ ಸಂದರ್ಭದಲ್ಲಿ ಈ ಹಿಂದೆ ಗ್ರಾಮದಲ್ಲಿ ನಡೆದ ಗೋಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದು ಈ ಬಗ್ಗೆ ವಿಡಿಯೋ ಸೆರೆಹಿಡಿದಿದ್ದಾರೆ. ಕಳೆದೆರಡು ದಿನಗಳ ಹಿಂದೆ ವ್ಯಾಪ್ತಿಯಲ್ಲಿ ಗೋಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ. ಈ ಭಾಗದಲ್ಲಿ ಕಳೆದ ಒಂದು ವರ್ಷದಿಂದ ಸುಮಾರು 25ಕ್ಕೂ ಅಧಿಕ ಗೋವುಗಳು ಕಾಣೆಯಾಗಿರುವದರ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಕರಣವನ್ನು ಬೇಧಿಸುವಲ್ಲಿ ಇಲಾಖೆಯು ವಿಫಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು. ಪೊಲೀಸರ ನಿರ್ಲಕ್ಷ್ಯವು ಗೋ ಕಳ್ಳರಿಗೆ ವರದಾನವಾಗಿದೆ ಎಂದು ಅಳಲು ತೋಡಿಕೊಂಡರು. ಆನಂದ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಕಳ್ಳರ ಉಪಾಯ : ಗೋ ಕಳ್ಳರು ಆಗಿಂದ್ದಾಗೆ ಮಾಲ್ದಾರೆ ವ್ಯಾಪ್ತಿಗೆ, ಮಾರುತಿ ವ್ಯಾನಿನಲ್ಲಿ ಆಗಮಿಸಿ ಗ್ರಾಮಸ್ಥರ ಚಲನವಲನ ಗಮನಿಸಿ ನಂತರ ಮೇಯಲು ಬಿಟ್ಟಿದ್ದ ಹಸು, ಕರುಗಳನ್ನು ಹಾಡಹಗಲೇ ಹಿಡಿದು ಕಾಫಿ ತೋಟದೊಳಗೆ ಕಟ್ಟಿ ಹಾಕುತ್ತಿದ್ದರು ಎನ್ನಲಾಗಿದೆ. ನಂತರ ಯಾರಾದರೂ ರಸ್ತೆಯಲ್ಲಿ ಬರುವ ಸಂದರ್ಭ ಜಾನುವಾರುಗಳನ್ನು ಕಳ್ಳತನ ಮಾಡಲು ಬಂದ ವ್ಯಕ್ತಿಗಳು ವ್ಯಾನಿನ ಬದಿಯಲ್ಲಿ ಸೊಪ್ಪು ಇನ್ನಿತರ ವಸ್ತುಗಳನ್ನು ಹಾಕಿ, ವ್ಯಾನ್ ದುರಸ್ತಿ ಪಡಿಸುತ್ತಿರುವಂತೆ ನಾಟಕವಾಡುತ್ತಾ ಸಂಚು ರೂಪಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.

ಕಟ್ಟಿ ಹಾಕಿದ ಗೋವುಗಳನ್ನು ರಾತ್ರಿ ಸಮಯದಲ್ಲಿ ತೆರಳಿ ವ್ಯಾನಿನ ಮೂಲಕ ಸಾಗಾಟ ಮಾಡುತ್ತಾ ಪರಾರಿಯಾಗುತ್ತಿದ್ದರು. ಆದರೆ ‘ಹತ್ತು ಬಾರಿ ಕದ್ದವನು ಒಂದು ಬಾರಿ ಸಿಕ್ಕಿಹಾಕಿಕೊಳ್ಳುವನು’ ಎಂಬ ಗಾದೆಯಂತೆ ಇಂದು ಗೋ ಕಳ್ಳರು ಸಿಕ್ಕಿ ಹಾಕಿಕೊಂಡಿದ್ದು, ಪೊಲೀಸರ ತನಿಖೆಯಿಂದ ಇನ್ನಷ್ಟು ಪ್ರಕರಣಗಳು ಬಹಿರಂಗವಾಗುವ ಸಾಧ್ಯತೆ ಇರುವದಾಗಿ ತಿಳಿದು ಬಂದಿದೆ.

ವರದಿ : ವಾಸು