ಸೋಮವಾರಪೇಟೆ, ಡಿ. 10: ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ವೈದ್ಯರ ಬಳಿ ಹೋಗುವ ಬದಲು ಸುಸ್ಥಿತಿಯಲ್ಲಿರುವಾಗಲೇ ತಪಾಸಣೆ ಮಾಡಿಸಿಕೊಂಡರೆ ಪ್ರತಿಯೊಬ್ಬರೂ ಶತಾಯುಷಿಗಳಾಗಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಡಾ. ನಿರ್ಮಲಾನಂದಾನಾಥ ಸ್ವಾಮೀಜಿ ಸಲಹೆ ನೀಡಿದರು. ಸೋಮವಾರದಂದು ಇಲ್ಲಿನ ಒಕ್ಕಲಿಗರ ಸಮುದಾಯಭವನದಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮೈಸೂರಿನ ಬಿಜಿಎಸ್ ಅಪಲೋ ಆಸ್ಪತ್ರೆ, ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಯುವ ವೇದಿಕೆ, ಪ್ರಗತಿಪರ ಮಹಿಳಾ ವೇದಿಕೆ ಹಾಗೂ ನಗರ ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಧುನಿಕ ಜೀವನ ಪದ್ಧತಿಗೆ ಮಾರುಹೋಗಿರುವ ಬಹುತೇಕ ಮಂದಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸದೇ ಇರುವದರಿಂದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯ ಕೆಟ್ಟ ನಂತರ ಹತಾಶರಾಗಿ ವೈದ್ಯರ ಬಳಿ ಹೋಗುವದರ ಬದಲು ಮುಂಜಾಗ್ರತೆ ವಹಿಸಿದರೆ ಉತ್ತಮ ಎಂದು ಹೇಳಿದರು.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಎಲ್ಲರನ್ನೂ ಪರೀಕ್ಷೆ ಮಾಡಿ ರೋಗಿಗಳ ಆಯಸ್ಸು ಹೆಚ್ಚಿಸುತ್ತಿರುವ ವೈದ್ಯರುಗಳ ಆಯಸ್ಸು ಒತ್ತಡದಿಂದಾಗಿ ಕಡಿಮೆಯಾಗುತ್ತಿರುವದು ಕಂಡು ಬಂದಿದೆ ಎಂದು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳು ಧ್ಯಾನದ ಮೂಲಕ ತಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಶಿಸ್ತುಬದ್ಧ ಜೀವನ, ಯೋಗಾಸನ ಹಾಗೂ ಧ್ಯಾನಕ್ಕೆ ಮೊರೆ ಹೋಗುವ ಮೂಲಕ ಆರೋಗ್ಯವಂತರಾಗಿ ಬಾಳಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್, ವಿಧಾನಪರಿಷತ್ ಮಾಜಿ ಸದಸ್ಯ

(ಮೊದಲ ಪುಟದಿಂದ) ಎಸ್.ಜಿ.ಮೇದಪ್ಪ, ನಗರ ಒಕ್ಕಲಿಗರ ಸಂಘಧ ಅಧ್ಯಕ್ಷ ಎಂ.ಎಂ. ಪ್ರಕಾಶ್‍ಕುಮಾರ್, ಆದಿಚುಂಚನಗಿರಿ ಶಾಖಾ ಮಠದ ಶ್ರೀಶೈಲನಾಥ ಸ್ವಾಮೀಜಿ ಇದ್ದರು. ಸಂಗೀತ ದಿನೇಶ್ ಸ್ವಾಗತಿಸಿ, ಕೆ.ಡಿ.ಚಂದ್ರಕಲಾ ಪ್ರಾರ್ಥಿಸಿ, ಕವಿತಾ ವಿರೂಪಾಕ್ಷ ನಿರೂಪಿಸಿದರು.

ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನ 70 ಮಂದಿ ತಜ್ಞ ವೈದ್ಯರು ಆರೋಗ್ಯ ತಪಾಸಣೆ ಮಾಡಿದರು. ಹೃದ್ರೋಗ, ನರರೋಗ, ಮೂತ್ರಪಿಂಡ, ಮಧುಮೇಹ, ಪಿತ್ತ ಜನಕಾಂಗ, ಕ್ಯಾನ್ಸರ್, ವೈದ್ಯಕೀಯ, ಶಸ್ತ್ರಚಿಕಿತ್ಸಾ, ಗರ್ಭಿಣಿ ಮತ್ತು ಸ್ತ್ರೀರೋಗ, ಕೀಲು ಮೂಳೆ, ದಂತವೈದ್ಯ, ಕಿವಿ,ಮೂಗು, ಗಂಟಲು, ನೇತ್ರ, ಚರ್ಮ, ಮಾನಸಿಕ ರೋಗಗಳಿಗೆ ತಪಾಸಣೆ ಮಾಡ ಲಾಯಿತು. ರೋಗಿಗಳಿಗೆ ಉಚಿತವಾಗಿ ಔಷಧಿ ಮಾತ್ರೆಗಳನ್ನು ವಿತರಿಸಲಾ ಯಿತು. ಅವಶ್ಯಕತೆಯಿರುವ ರೋಗಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಮಂಗಳವಾರ ಕರೆದೊಯ್ಯಲಾಗುವದು. ಆಸ್ಪತ್ರೆಯ ಜನರಲ್ ವಾರ್ಡ್‍ಗಳಲ್ಲಿ ವೈದ್ಯಕೀಯ ಸೌಲಭ್ಯದೊಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಸಂಯೋಜಕ ಧಮೇಂದ್ರ ಹೇಳಿದರು. ಶಿಬಿರದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ. ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಭೇಟಿ ನೀಡಿ ರೋಗಿಗಳನ್ನು ವಿಚಾರಿಸಿದರು. ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಇದ್ದರು. ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಯುವವೇದಿಕೆಯ ಅಧ್ಯಕ್ಷ ಬಿ.ಜೆ.ದೀಪಕ್, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರ ಗೌಡ ಸಂಘದ ಅಧ್ಯಕ್ಷ ಎಂ.ಎಂ.ಪ್ರಕಾಶ್ ಕುಮಾರ್, ಬಿಟಿಸಿಜಿ ಕಾಲೇಜಿನ ಲಿಯೋ ಕ್ಲಬ್‍ನ ಸದಸ್ಯರು, ಒಕ್ಕಲಿಗರ ವಿವಿಧ ಸಂಘಸಂಸ್ಥೆಗಳ ಸದಸ್ಯರುಗಳು ಕಾರ್ಯನಿರ್ವಹಿಸಿದರು.